

ಕಂಪ್ಲಿ: ಪುರಸಭೆ ಸಭಾಂಗಣದಲ್ಲಿ ಕಂಪ್ಲಿ ವಿಧಾನಸಭಾ ಕ್ಷೇತ್ರದ ಎಫ್‌ಎಸ್‌ಟಿ, ಎಸ್‌ಎಸ್‌ಟಿ, ಸೆಕ್ಟರ್ ಅಧಿಕಾರಿ, ಚುನಾವಣಾ ವೆಚ್ಚದ ಅಧಿಕಾರಿಗಳಿಗೆ ಶನಿವಾರ ತರಬೇತಿ ಕಾರ್ಯಕ್ರಮ ಜರುಗಿತು.
ಜಿಲ್ಲಾ ಚುನಾವಣಾ ವೆಚ್ಚ ನಿರೀಕ್ಷಣಾ ಕೋಶದ ಸಹಾಯಕ ಅಧಿಕಾರಿ ಟಿ.ಹರೀಶ್ ಮಾತನಾಡಿ, ಚುನಾವಣೆಗೆ ನಿಯೋಜಿಸಿದ ಎಲ್ಲ ಅಧಿಕಾರಿ ವರ್ಗದವರು ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸಬೇಕಿದೆ. ಚುನಾವಣಾ ಕಾರ್ಯದಲ್ಲಿ ಉದಾಸೀನ ಬೇಡ ಎಂದರು.
ಸಕಾಲದಲ್ಲಿ ಜಾಗರೂಕತೆಯಿಂದ ವಸ್ತುನಿಷ್ಠವಾಗಿ ಕಾರ್ಯನಿರ್ವಹಿಸಬೇಕು. ಚುನಾವಣೆಗೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ವಿಎಸ್‌ಟಿ ತಂಡದವರು 45 ನಿಮಿಷ ಮುಂಚೆಯೇ ಹಾಜರಾಗಿ ಕಾರ್ಯಕ್ರಮ ಆರಂಭಕ್ಕೂ ಮುನ್ನ ಅಗತ್ಯ ದೃಶ್ಯಗಳನ್ನು ದಾಖಲಿಸಿಕೊಳ್ಳಬೇಕು ಎಂದು ಸೂಚಿಸಿದರು.
ಪ್ರತಿಯೊಂದು ಅಂಶಕ್ಕೂ ನಿಗದಿಪಡಿಸಿದ ಲೆಕ್ಕಚಾರದಂತೆ ಖರ್ಚು ಹಾಕಬೇಕು. ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗೆ 40 ಲಕ್ಷ ರೂ.ಗೆ ನಿಗದಿಪಡಿಸಿದ ವೆಚ್ಚ ಮಿತಿ ಮೀರಿದಲ್ಲಿ ಅಭ್ಯರ್ಥಿಯ ಸದಸ್ಯತ್ವ ಅನರ್ಹಗೊಳ್ಳುವುದು. ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಅಂಶಗಳನ್ನು ವಿಡಿಯೋ ದಾಖಲೆ ಮಾಡುವುದು ಅಗತ್ಯ. ನೀವೆಲ್ಲ ತಂಡದ ಸದಸ್ಯರೇ ಹೊರತು ನಾಯಕನಲ್ಲ ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು ಮಾರ್ಗಸೂಚಿಯಂತೆ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಚುನಾವಣಾಧಿಕಾರಿ ಡಾ.ನಯನ, ತಹಸೀಲ್ದಾರ್ ಗೌಸಿಯಾ ಬೇಗಮ್, ಡಿಇಎಂಸಿ ನೋಡಲ್ ಅಧಿಕಾರಿ ಖಾಜಾ ಮೊಹಿನುದ್ದೀನ್, ಎಇಒ ಮೆಹಬೂಬ್‌ಖಾನ್, ತಾಪಂ ಇಒಗಳಾದ ಕೆ.ಎಸ್.ಮಲ್ಲನಗೌಡ, ಕೆ.ವಿ.ನಿರ್ಮಲಾ, ಉಪತಹಸೀಲ್ದಾರ್ ಬಿ.ರವೀಂದ್ರಕುಮಾರ್, ಸಿಒಗಳಾದ ಡಾ.ಎನ್.ಶಿವಲಿಂಗಪ್ಪ, ವಿಜಯಲಕ್ಷ್ಮೀ ಇತರರಿದ್ದರು.