ವಿವಿಧ ಭೇಡಿಕೆ ಈಡೇರಿಕೆಗೆ ಆಗ್ರಹಿಸಿ ವಿಧಾನಸಭಾ ಚಲೋ

WhatsApp Image 2022-12-16 at 5.01.29 PM
Published on

ಮಡಿಕೇರಿ: ಕನಿಷ್ಟ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾ.ಪಂ. ನೌಕರರ ಸಂಘದ ವತಿಯಿಂದ ಫೆಬ್ರವರಿ ಮೊದಲ ವಾರದಲ್ಲಿ ವಿಧಾನಸಭಾ ಚಲೋ, ಕಾರ್ಮಿಕ ಆಯುಕ್ತರ ಕಚೇರಿ ಮುಂಭಾಗ ಹೋರಾಟ ನಡೆಸಲಾಗುತ್ತದೆ ಎಂದು ಸಂಘದ ಜಿಲ್ಲಾಧ್ಯಕ್ಷ ಪಿ.ಆರ್.ಭರತ್ ತಿಳಿಸಿದರು.


ಗ್ರಾ.ಪಂ ಸಿಬ್ಬಂದಿಗಳಿಗೆ ನಿಗಧಿಯಾಗಿರುವ ಕನಿಷ್ಠ ವೇತನ ಪರಿಷ್ಕರಣೆ ಮಾಡಬೇಕೆಂಬ ನಿಯಮವಿದ್ದರೂ ಮಾಡಿಲ್ಲ ಎಂದು ದೂರಿದ ಅವರು, ವೇತನ ನೀಡದೆ ಬಾಕಿ ಇರುವ ಎಲ್ಲಾ ನೌಕರರಿಗೂ ಕೂಡಲೇ ವೇತನ ನೀಡಬೇಕು. ನೌಕರರಿಗೆ ಬಡ್ತಿ ನೀಡಬೇಕು. ಪಂಚಾಯಿತಿ ಮಟ್ಟದಲ್ಲಿ ಅನುಕಂಪದ ನೇಮಕಾತಿ, ಕನಿಷ್ಠ ವೇತನ, ತುಟ್ಟಿಭತ್ಯೆ ಜಾರಿಗೆ ತರಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.


ಬೆಲೆ ಏರಿಕೆಯ ದಿನದಲ್ಲಿ ಈಗಿನ ವೇತನ ಸಾಲುವುದಿಲ್ಲ. ದಿನನಿತ್ಯದ ವಸ್ತುಗಳ ಬೆಲೆ ಹೆಚ್ಚು ಮಾಡುವ ಸರ್ಕಾರ ನೌಕರರ ವೇತನ ಹೆಚ್ಚಳ ಮಾಡಲು ಆಸಕ್ತಿಯಿಲ್ಲ. ಕಾರ್ಮಿಕರ ಬಗ್ಗೆ ಕಾಳಜಿಯಿಲ್ಲ. ಜನಪ್ರತಿನಿಧಿಗಳು ಕಾರ್ಮಿಕರ ವೇತನ ಹೆಚ್ಚಿಸದೇ ತಮ್ಮ ವೇತನವನ್ನು ಹೆಚ್ಚಳ ಮಾಡಿಸಿಕೊಳ್ಳುವುದರಲ್ಲಿ ಮಗ್ನರಾಗಿದ್ದಾರೆ ಹೊರತು ದುಡಿಯುವ ವರ್ಗದವರ ಬಗ್ಗೆ ಚರ್ಚೆ ನಡೆಸುವುದಿಲ್ಲ. ಗ್ರಾಮ ಪಂಚಾಯಿತಿ ನೌಕರರನ್ನು ಕಡೆಗಣಿಸುವ ಸರ್ಕಾರ ಇದಾಗಿದೆ ಎಂದು ಹೇಳಿದರು.


ಜಿಲ್ಲೆಯಲ್ಲಿ ವಾಟರ್ ಮ್ಯಾನ್‌ಗೆ ೨೫೦೦ ರೂ, ಪೌರಕಾರ್ಮಿಕರಿಗೆ ೭೦೦೦ ನೀಡಿ ದುಡಿಸಿಕೊಳ್ಳಲಾಗುತ್ತಿದೆ. ಕನಿಷ್ಟ ವೇತನ ಕೂಡ ನೀಡುತ್ತಿಲ್ಲ. ನೌಕರರನ್ನು ಪಂಚಾಯಿತಿಯ ಕೆಲಸ ಮಾಡಿಸದೇ ಇತರ ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಒತ್ತಡದ ನಡುವೆ ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ ೧೮೫ ಹುದ್ದೆಗಳು ಖಾಲಿಯಿದ್ದರು ಭರ್ತಿಗೆ ಮುಂದಾಗುತ್ತಿಲ್ಲ ಎಂದು ದೂರಿದರು.


ಸುದ್ದಿಗೋಷ್ಠಿಯಲ್ಲಿ ಮಡಿಕೇರಿ ತಾಲೂಕು ಪದಾಧಿಕಾರಿಗಳಾದ ಬಿ.ಕೆ.ಜತ್ತಪ್ಪ, ಎಂ.ಎ.ಆಮೀರ್, ಎಚ್.ಎಂ.ದಿನೇಶ್, ಕುಶಾಲನಗರ ತಾಲೂಕು ಪದಾಧಿಕಾರಿ ಕಂದಸ್ವಾಮಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net