

ಮಂಗಳೂರು: ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ 2018ರ ಮೇ ಯಲ್ಲಿ ನಡೆದ ವಿಧಾನಸಭಾ ಚುನಾವಣೆ ಸಂದರ್ಭ ಇಲೆಕ್ಟ್ರಾನಿಕ್ ವೋಟಿಂಗ್ ಮಿಷನ್ ದುರ್ಬಳಕೆ ಮಾಡಲಾಗಿದೆ ಹಾಗೂ ಬಿಜೆಪಿ ಅಭ್ಯರ್ಥಿಯ ಪತ್ನಿ ಧರ್ಮದ ಆಧಾರದಲ್ಲಿ ಹಿಂದುತ್ವ ಹೆಸರಿನಲ್ಲಿ ಮತ ಯಾಚಿಸಿದ್ದಾರೆ. ಆದ್ದರಿಂದ ವಿಜೇತ ಅಭ್ಯರ್ಥಿ ಆಯ್ಕೆಯನ್ನು ರದ್ದುಪಡಿಸಿ ಪರಾಜಿತ ಅಭ್ಯರ್ಥಿಯನ್ನು ವಿಜಯಿ ಎಂದು ಘೋಷಿಸುವಂತೆ ಕೋರಿದ ಚುನಾವಣಾ ತಕರಾರು ಅರ್ಜಿಯನ್ನು ರಾಜ್ಯ ಹೈಕೋರ್ಟ್ ವಜಾ ಗೊಳಿಸಿದೆ.
ಅಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಜೆ.ಆರ್. ಲೋಬೊ ಅವರು ಬಿಜೆಪಿ ಅಭ್ಯರ್ಥಿ ವೇದವ್ಯಾಸ್ ಕಾಮತ್ ವಿರುದ್ಧ ಸೋಲನುಭವಿಸಿದ್ದರು. ಫಲಿತಾಂಶದ ಬಳಿಕ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್.ಲೋಬೊ ಅವರು ರಾಜ್ಯ ಹೈಕೋರ್ಟಿಗೆ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಇವಿಎಂ ದುರ್ಬಳಕೆ ಮಾಡಲಾಗಿದೆ. ಅಲ್ಲದೆ ವೇದವ್ಯಾಸ್ ಕಾಮತ್ ಅವರ ಪತ್ನಿ ಹಿಂದುತ್ವ ಹೆಸರಿನಲ್ಲಿ ಮತ ಯಾಚನೆ ಮಾಡುವ ಮೂಲಕ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಸಹಕರಿಸಲಾಗಿದೆ. ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಎಂಬ ಆರೋಪವನ್ನು ಅರ್ಜಿಯಲ್ಲಿ ಮಾಡಿದ್ದರು.
ಈ ಪ್ರಕರಣದಲ್ಲಿ ವೇದವ್ಯಾಸ್ ಕಾಮತ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅರುಣ್ ಶ್ಯಾಮ್, ಹಿಂದುತ್ವ ಎನ್ನುವುದು ಧರ್ಮ ಸೂಚಕವಲ್ಲ. ಅದು ಜೀವನಪದ್ಧತಿ ಎಂಬುದನ್ನು ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಿದೆ ಎಂಬ ಅಂಶವನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಇವಿಎಂ ದುರ್ಬಳಕೆಪ್ರಶ್ನೆಯೇ ಇಲ್ಲ. ಇವಿಎಂ ದುರ್ಬಳಕೆ ಅಸಾಧ್ಯ ಎಂಬುದನ್ನು ಕೂಡ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಉಲ್ಲೇಖಿಸಿ ಅವರು ವಾದ ಮಂಡಿಸಿದ್ದರು. ಸುಮಾರು ಐದು ವರ್ಷ ಈ ಕುರಿತು ವಾದ-ಪ್ರತಿ ವಾದ ನಡೆಸಲಾಗಿತ್ತು.
ಈ ಬಗ್ಗೆ ಇತ್ತಂಡ ವಾದ ಪ್ರತಿವಾದ ಆಲಿಸಿದ ಹೈಕೋರ್ಟ್‌ನ ಏಕಸದಸ್ಯ ನ್ಯಾಯಪೀಠದ ನ್ಯಾಯಮೂರ್ತಿ ದೇವದಾಸ್ ಅವರು, ಅರ್ಜಿದಾರರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂಬುದನ್ನು ಮನಗಂಡು ಜುಲೈ 6ರಂದು ಅರ್ಜಿಯನ್ನು ವಜಾಗೊಳಿಸಿದ್ದಾರೆ.