

ವಿಜಯವಾಣಿ ಸುದ್ದಿಜಾಲ ಬಂಟ್ವಾಳ
ಅತಿಯಾದ ಮಳೆಯಿಂದ ತಾಲೂಕಿನ ಅನೇಕ ಕಡೆ ಮನೆ ಸಹಿತ ಕೃಷಿಗೆ ಅಪಾರ ಹಾನಿಯಾಗಿದ್ದು ಜನಜೀವನದ ಮೇಲೆ ಪ್ರಭಾವ ಬೀರಿದೆ. ಹಾಗಾಗಿ ಬಂಟ್ವಾಳ ತಾಲೂಕನ್ನು ನೆರೆ ಪೀಡಿತ ತಾಲೂಕು ಎಂದು ಘೋಷಣೆ ಮಾಡಿ ವಿಶೇಷ ಅನುದಾನ ಒದಗಿಸುವಂತೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ವಿಧಾನಸಭೆ ಅಧಿವೇಶನದಲ್ಲಿ ಒತ್ತಾಯಿಸಿದ್ದಾರೆ.
ಆದರೆ ಕಂದಾಯ ಸಚಿವರು ನೆರೆ ಪೀಡಿತ ತಾಲೂಕು ಘೋಷಣೆಗೆ ನಿರಾಕರಿಸಿದ್ದು, ಇದರಿಂದ ಪ್ರಾಕೃತಿಕ ವಿಕೋಪದಿಂದ ಹಾನಿಯಾದ ಸಂತ್ರಸ್ತ ಕುಟುಂಬಗಳಿಗೆ ಅನ್ಯಾಯವಾಗಿದೆ ಎಂದು ಶಾಸಕರು ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ಸಂಪೂರ್ಣ ಹಾನಿಯಾದ ಮನೆಗಳಿಗೆ ತಲಾ 5 ಲಕ್ಷ ರೂ. ಅನುದಾನವನ್ನು ಕಳೆದ ಅವಧಿಯಲ್ಲಿ ಬಿಜೆಪಿ ಸರ್ಕಾರ ನೀಡಿದೆ. ಆದರೆ ಸದ್ಯ ಕಾಂಗ್ರೆಸ್ ಸರ್ಕಾರ 1.20 ಲಕ್ಷ ರೂ.ಮಾತ್ರ ಹಣವನ್ನು ನೀಡಿ ಸಂತ್ರಸ್ತರಿಗೆ ಅನ್ಯಾಯವೆಸಗುತ್ತಿದೆ ಎಂದು ತಿಳಿಸಿದ್ದಾರೆ.