ಬರ್ತ್​ಡೇ ಪಾರ್ಟಿಯಲ್ಲಿ ಚಿತ್ರನಟನ ಮೇಲೆ ಹಲ್ಲೆ; ಆಡಿ ಕಾರಿನ ಗಾಜುಗಳು ಧ್ವಂಸ

Praveen Tej
Published on

ಬೆಂಗಳೂರು: ಬರ್ತ್‌ಡೇ ಪಾರ್ಟಿಯೊಂದರಲ್ಲಿ ನಟ ಪ್ರವೀಣ್ ತೇಜ್ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿರುವ ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಕೋಣನಕುಂಟೆ ಠಾಣೆಯಲ್ಲಿ ನಟ ಪ್ರವೀಣ್ ತೇಜ್ ದಿಲೀಪ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಸ್ನೇಹಿತರ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ಗೆ ಫೆ.12ರಂದು ಹೋಗಿದ್ದೆ. ಈ ವೇಳೆ ಪರಿಚಿತನಾದ ದಿಲೀಪ್ ಎಂಬಾತ ತಮ್ಮ ವೃತ್ತಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾನೆ. ಅಲ್ಲದೆ, ’ನೀನು ಸಿನಿಮಾಗಳಲ್ಲಿ ಮಾತ್ರ ಹೀರೋ, ನಿಜ ಜೀವನದಲ್ಲಿ ಅಲ್ಲ’ ಎಂದು ದೈಹಿಕವಾಗಿ ಹಲ್ಲೆಗೆ ಮುಂದಾಗಿದ್ದು, ಸ್ಥಳದಲ್ಲಿದ್ದ ಸ್ನೇಹಿತರು ತಡೆದಿದ್ದಾರೆ. ಆದರೂ ತಮ್ಮ ಕುತ್ತಿಗೆ ಭಾಗದಲ್ಲಿ ಗಾಯಗಳಾಗಿವೆ ಎಂದು ದೂರಿನಲ್ಲಿನಟ ಉಲ್ಲೇಖಿಸಿದ್ದಾರೆ.

ಘಟನೆಯಿಂದ ಘಾಸಿಗೊಂಡು ಆ ದಿನ ಅಲ್ಲಿಯೇ ಉಳಿದುಕೊಂಡು, ಮರುದಿನ ಬೆಳಿಗ್ಗೆ ಹೊರಟ್ದಿದ್ದೆ. ಪಾರ್ಕಿಂಗ್ ಸ್ಥಳದಲ್ಲಿರುವ ತನ್ನ ಆಡಿ ಕಾರಿನ ಬಳಿ ಬಂದಾಗ ಕಾರಿನ ಗಾಜುಗಳನ್ನು ಜಖಂಗೊಳಿಸಲಾಗಿತ್ತು. ಬಳಿಕ ಸಿಸಿ ಕ್ಯಾಮರಾದಲ್ಲಿ ಪರಿಶೀಲಿಸಿದಾಗ ಆರೋಪಿ ದಿಲೀಪ್ ನನ್ನ ಕಾರಿನ ಗಾಜುಗಳನ್ನು ಧ್ವಂಸಗೊಳಿಸಿರುವುದು ಕಂಡು ಬಂದಿದೆ. ಆದರಿಂದ ತಮಗೆ ಮತ್ತು ತಮ್ಮ ಕುಟುಂಬ ಸದಸ್ಯರಿಗೆ ಪ್ರಾಣ ಬೆದರಿಕೆ ಇದ್ದು, ಜತೆಗೆ ತಮ್ಮ ಸಿನಿಮಾ ಪ್ರಚಾರಕ್ಕೆ ಹೊರಗಡೆ ಹೋಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ದಿಲೀಪ್ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಪ್ರವೀಣ್ ತೇಜ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net