

ವಿಜಯವಾಣಿ ಸುದ್ದಿಜಾಲ ಸರ್ಜಾಪುರ
ಕೂಲಿ ಕಾರ್ಮಿಕ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿ ಹಲ್ಲೆ ನಡೆಸಿದ ಆರೋಪದ ಮೇಲೆ ದುಷ್ಕರ್ಮಿಯನ್ನು ಸರ್ಜಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮುಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಟ್ಟನಹಳ್ಳಿ ಗ್ರಾಮದ ತೋಟವೊಂದರಲ್ಲಿ ಅ.12ರಂದು ಪ್ರಕರಣ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಕೂಲಿಕಾರ್ಮಿಕ ಮಹಿಳೆ ಸುಮಲತಾ (38) ಹಲ್ಲೆಗೊಳಲಾಗಿದ್ದು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ಆಕೆ ಮಗಳಿಗೂ ಗಾಯಗಳಾಗಿವೆ. ಆರೋಪಿ ಯಾಸಿನ್(18) ಎಂಬುವನ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಏನಿದು ಪ್ರಕರಣ? ಮಟ್ಟನಹಳ್ಳಿ ಗ್ರಾಮದ ನಾಗಪ್ಪ ಎಂಬುವವರ ತೋಟದಲ್ಲಿ ಪುದೀನ ಸೊಪ್ಪು ಕೀಳುವ ಕೆಲಸಕ್ಕೆ ಮಗಳೊಂದಿಗೆ ಸುಮಲತಾ ಬಂದಿದ್ದರು. ಈ ವೇಳೆ ಮಗಳ ಮೇಲೆ ದೃಷ್ಟಿನೆಟ್ಟಿದ ಆರೋಪಿ ಲೈಂಗಿಕ ಕಿರುಕುಳ ನೀಡಲು ಹೊಂಚು ಹಾಕಿದ್ದ. ಕೂಲಿ ಕೆಲಸ ಮುಗಿಸಿ ಮರಳಲು ಮುಂದಾಗಿದ್ದ ವೇಳೆ ಮಗಳನ್ನು ಬೈಕ್‌ನಲ್ಲಿ ಜತೆ ಕಳಿಸಿಕೊಡುವಂತೆ ಸುಮಲತಾಳನ್ನು ಪೀಡಿಸಿದ್ದ. ಇದಕ್ಕೆ ತಾಯಿ ನಿರಾಕರಿಸಿದ್ದರು. ಈ ವೇಳೆ ಮಾತಿನ ಚಕಮಕಿ ನಡೆದು ಆರೋಪಿ ಯಾಸಿನ್ ಸೊಪ್ಪು ಕೀಳಲು ತಂದಿದ್ದ ಆಯುಧದಿಂದ ಸುಮಲತಾ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಅಡ್ಡಬಂದ ಮಗಳ ಮೇಲೂ ಹಲ್ಲೆಯಾಗಿದೆ. ತಕ್ಷಣ ಇನ್ನಿತರ ಕೂಲಿಕಾರ್ಮಿಕರು ಮಧ್ಯೆ ಪ್ರವೇಶಿಸಿ ಆರೋಪಿಯಿಂದ ತಾಯಿ ಮಗಳನ್ನು ರಕ್ಷಣೆ ಮಾಡಿದ್ದಾರೆ ಎನ್ನಲಾಗಿದೆ.ಸರ್ಜಾರಪುರ ಆರಕ್ಷಕ ವೃತ್ತ ನೀರಿಕ್ಷಕ ಪಿ.ಜಿ ನವೀನ್ ಕುಮಾರ್ ಹಾಗೂ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ. ಅದೃಷ್ಟವಶಾತ್ ತಾಯಿ ಹಾಗೂ ಮಗಳು ಚಿಕಿತ್ಸೆ ಬಳಿಕ ಚೇತರಿಸಿಕೊಂಡಿದ್ದಾರೆ ಎನ್ನಲಾಗಿದೆ.