ಮಾಜಿ ಸೈನಿಕನ ಮೇಲೆ ಹಲ್ಲೆ, ಕಠಿಣ ಕ್ರಮಕ್ಕೆ ಒತ್ತಾಯ

ex army sateeshchandra tejaswi speak
ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷ ಸುಭಾಶ್ಚಂದ್ರ ತೇಜಸ್ವಿ ಮಾತನಾಡಿದರು.
Published on

ಶಿವಮೊಗ್ಗ: ಶಿಕಾರಿಪುರ ತಾಲೂಕಿನ ಕಪ್ಪನಹಳ್ಳಿಯ ಮಾಜಿ ಸೈನಿಕ ಪಿ.ವೈ.ರವಿ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷ ಸುಭಾಶ್ಚಂದ್ರ ತೇಜಸ್ವಿ ಒತ್ತಾಯಿಸಿದರು.

ರವಿ ಅವರು ಮಾಜಿ ಸೈನಿಕರಾಗಿದ್ದು, 18 ವರ್ಷ ದೇಶ ಸೇವೆ ಮಾಡಿ ಇದೀಗ ಕಪ್ಪನಹಳ್ಳಿಯಲ್ಲಿ ಕೃಷಿ ಕಾಯಕ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಸಾಮಾಜಿಕ ಹೋರಾಟಗಾರರಾದ ಅವರ ಮೇಲೆ ಸ್ಥಳೀಯ ಕೆಲವರು ವಿನಾಕಾರಣ ಹಲ್ಲೆ ನಡೆಸಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ರವಿ ಅವರು ಈಗ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಮೀನಿನಲ್ಲಿ ಕೆಲಸ ಮಾಡುವಾಗ ದುಷ್ಕರ್ಮಿಗಳು ಕತ್ತಿ, ಸಲಾಕೆಗಳಿಂದ ಹಲ್ಲೆ ಮಾಡಿದ್ದು ತಲೆಗೆ ಪೆಟ್ಟಾಗಿ ಇದೀಗ ಆಸ್ಪತ್ರೆ ಸೇರುವಂತಾಗಿದೆ. ಈ ಬಗ್ಗೆ ದೂರು ನೀಡಿದರೂ ಎಫ್‌ಐಆರ್ ದಾಖಲಿಸದೇ ರವಿ ಅವರೇ ಮೇಲೆ ಕೇಸ್ ದಾಖಲಿಸಲಾಗಿದೆ. ಹಾಗಾಗಿ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಅವರು ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹಿಸಿದರು.
ಮಾಜಿ ಸೈನಿಕನ ಪತ್ನಿ ಸಿ.ಶ್ರುತಿ ಮಾತನಾಡಿ, ರವಿ ಅವರು ಸಾಮಾಜಿಕ ಹೋರಾಟಗಾರರಾಗಿದ್ದರು. ಭ್ರಷ್ಟಾಚಾರ ಸಹಿಸುತ್ತಿರಲಿಲ್ಲ. ಗ್ರಾಮ ಪಂಚಾಯಿತಿಯಲ್ಲಿ ನಡೆದ ಕೆಲವು ಅಕ್ರಮಗಳಿಗೆ ಸಂಬಂಧಿಸಿದಂತೆ ಅವರು ಪ್ರಶ್ನೆ ಮಾಡಿದ್ದೆ ತಪ್ಪಾಗಿದ್ದು ಇದೇ ಕಾರಣಕ್ಕಾಗಿ ದುಷ್ಕರ್ಮಿಗಳ ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರಿದರು. ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಆರ್.ದಿನೇಶ್, ರಾಜ್ಯ ಸಂಚಾಲಕ ವಾಸಪ್ಪ, ಉಪಾಧ್ಯಕ್ಷ ಮಾಲತೇಶ್, ಸದಸ್ಯರಾದ ಪುಟ್ಟರಾಜು, ಶಂಕ್ರಾ ನಾಯ್ಕ, ಎಚ್.ಬಿ.ಸತೀಶ್,ಜ್ಞಾನೇಶ್ವರ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net