ಪೌರ ಕಾರ್ಮಿಕರ ಮೇಲೆ ಹಲ್ಲೆ- ಇಬ್ಬರ ವಿರುದ್ಧ ದೂರು

Manavi
Published on

ಕಾರವಾರ: ರಸ್ತೆಯ ಪಕ್ಕ ಕಸ ಎಸೆಯಬೇಡಿ ಎಂದ ಇಲ್ಲಿನ ನಗರಸಭೆಯ ಪೌರ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಇಬ್ಬರ ವಿರುದ್ಧ ಇಲ್ಲಿನ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೌರ ಕಾರ್ಮಿಕರಾದ ಚೇತನ ವಿ. ಕೊರಗ ಹಾಗೂ ಪುರುಷೋತ್ತಮ ಕೊರಗ ಅವರು ನೀಡಿದ ದೂರಿನ ಆಧಾರದ ಮೇಲೆ ನಗರದ ಬಸ್ ನಿಲ್ದಾಣ ಎದುರಿನ ನಿತಿನ್ ಹರಿಕಂತ್ರ ಹಾಗೂ ನಿತೀಶ ಹರಿಕಂತ್ರ ವಿರುದ್ಧ ಪ್ರಕರಣ ದಾಖಲಾಗಿದೆ.

ಸೋಮವಾರ ರಾತ್ರಿ ಕಸ ಲೋಡಿಂಗ್ ಕೆಲಸ ಮುಗಿಸಿದ ನಂತರ ಬೈಕ್‌ನಲ್ಲಿ ತೆರಳುವಾಗ ಬಸ್ ನಿಲ್ದಾಣದ ಹೆಗಡೆಕಟ್ಟೆ ಆಸ್ಪತ್ರೆಯ ಎದುರು ನಿತಿನ್ ಹರಿಕಂತ್ರ ಕಸ ಎಸೆಯುತ್ತಿದ್ದರು. ಇಲ್ಲಿ ಸ್ವಚ್ಛತೆ ಮುಗಿದಿದೆ. ಕಸ ಎಸೆಯಬೇಡಿ ಎಂದಾಗ ನಿಂದಿಸಿ, ಕೋಲಿನಿಂದ ಹಲ್ಲೆ ನಡೆಸಿದರು ಎಂದು ಚೇತನ್ ಕೊರಗ ದೂರು ನೀಡಿದ್ದಾರೆ.

ಮನವಿ ಸಲ್ಲಿಕೆ

ಪೌರ ಕಾರ್ಮಿಕರು ನಗರದ ಸ್ವಚ್ಛತೆ ಮಾಡುವ ಸಿಪಾಯಿಗಳು. ಅವರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸಂಘದ ಪರವಾಗಿ ಮಂಗಳವಾರ ಮನವಿ ಸಲ್ಲಿಸಲಾಯಿತು.

ಆಪಾದಿತರನ್ನು ತಕ್ಷಣ ಬಂಧಿಸಬೇಕು ಎಂದು ಪೌರ ಕಾರ್ಮಿಕರು ಪೌರಾಯುಕ್ತ ಕೆ.ಚಂದ್ರಮೌಳಿ ಅವರಿಗೆ ಮನವಿ ಸಲ್ಲಿಸಿದರು. ನಂತರ ಶಹರ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದರು. ಅವರ ವಿರುದ್ಧ ಕಠಿಣ ಕ್ರಮವಾಗುವವರೆಗೆ ಕಸ ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net