ಕಾರು ಚಾಲಕನ ಮೇಲೆ ಹಲ್ಲೆ: ಓವರ್​ಟೇಕ್ ವಿಚಾರಕ್ಕೆ ಬೈಕ್ ಸವಾರರ ಕೃತ್ಯ

Clash
Published on

ಕೆ.ಆರ್.ಪುರ: ಬೈಕ್ ಹಿಂದಿಕ್ಕಿದರು ಎಂಬ ಕಾರಣಕ್ಕೆ ಕೆ.ಆರ್. ಪುರದ ಅಯ್ಯಪ್ಪನಗರದಲ್ಲಿ ಕಾರನ್ನು ಹಿಂಬಾಲಿಸಿ ಅಡ್ಡಗಟ್ಟಿದ ಇಬ್ಬರು ಬೈಕ್ ಸವಾರರು ಕಾರು ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ.

ಆರ್.ಟಿ. ನಗರದ ನಿವಾಸಿ ತಿಲಕ್​ರಾಜ್ ಹಲ್ಲೆಗೊಳಗಾದವರು. ವೈಟ್​ಫೀಲ್ಡ್​ನಲ್ಲಿರುವ ಕಂಪನಿಯಲ್ಲಿ ಸಾಫ್ಟ್​ವೇರ್ ಇಂಜಿನಿಯರ್ ಆಗಿರುವ ತಿಲಕ್, ಸೋಮವಾರ (ಮಾ.2) ಸಂಜೆ 4.15 ಗಂಟೆಯಲ್ಲಿ ಕಾರಿನಲ್ಲಿ ಹೂಡಿಯಿಂದ ಅಯ್ಯಪ್ಪನಗರದ ಮುಖ್ಯರಸ್ತೆ ಮಾರ್ಗವಾಗಿ ಆರ್.ಟಿ. ನಗರಕ್ಕೆ ತೆರಳುತ್ತಿದ್ದಾಗ ಅಯ್ಯಪ್ಪನಗರದ ಕೃಷ್ಣ ಕಮಿಟಿ ಹಾಲ್ ಬಳಿ ಬೈಕ್ ಸವಾರರು ಕಾರನ್ನು ಅಡ್ಡಗಟ್ಟಿದ್ದಾರೆ. ಈ ವೇಳೆ ಬೈಕ್​ನಲ್ಲಿದ್ದ ಓರ್ವ ಕಬ್ಬಿಣದ ರಾಡ್​ನಿಂದ ಕಾರಿನ ಗಾಜು ಒಡೆದು ಹಾಕಿದ್ದಾನೆ. ಅದನ್ನು ಪ್ರಶ್ನಿಸಲು ಮುಂದಾದಾಗ ಇಬ್ಬರೂ ಸೇರಿ, ‘ನಮ್ಮನ್ನೇ ಹಿಂದಿಕ್ಕಿ ಬರುತ್ತಿಯಾ’ ಎಂದು ಹೇಳಿ ಹಲ್ಲೆ ನಡೆಸಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆರೋಪಿಸಿ ತಿಲಕ್​ರಾಜ್ ದೂರು ಕೊಟ್ಟಿದ್ದಾರೆ.

ಕಾರಿನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಆರೋಪಿಗಳ ಮುಖಚಹರೆ ಸೆರೆಯಾಗಿದೆ. ಅದನ್ನು ಆಧರಿಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net