

ಮಡಿಕೇರಿ: ಜನಪ್ರತಿನಿಧಿಯೊಬ್ಬರ ಮೇಲಿನ ಹಲ್ಲೆ ಪ್ರಕರಣ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಘಟನೆಯಾಗಿದ್ದು, ಇದನ್ನು ತೀವ್ರವಾಗಿ ಖಂಡಿಸುವುದಾಗಿ ಎಸ್‌ಆರ್‌ವಿಕೆಎಲ್ ವೆಲ್ ಫೇರ್ ಅಸೋಸಿಯೇಷನ್ ಅಧ್ಯಕ್ಷ ಡಾ.ಮೋಹನ್ ಅಪ್ಪಾಜಿ ಹೇಳಿದರು.
ನಗರಸಭಾ ಸದಸ್ಯರಾಗಿರುವ ಕಾಳಚಂಡ ಅಪ್ಪಣ್ಣರವರು ವೆಲ್ ಫೇರ್ ಅಸೋಸಿಯೇಷನ್ ಸದಸ್ಯರಾಗಿದ್ದಾರೆ. ಜಾಗದ ದಾಖಲೆಗಳಿಗೆ ಸಂಬಂಧಿಸಿದಂತೆ ಇವರ ಮೇಲೆ ಹಲ್ಲೆ ನಡೆಸಿರುವುದು ಸರಿಯಲ್ಲ. ದಾಖಲೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಅಥವಾ ಉಪ ವಿಭಾಗಾಧಿಕಾರಿಗಳಿಗೆ ದೂರನ್ನು ನೀಡಬಹುದಿತ್ತು. ಆದರೆ, ಜನಪ್ರತಿನಿಧಿಯೊಬ್ಬರ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಇತ್ತೀಚೆಗೆ ನಗರದ ಮೈತ್ರಿಭವನದ ಸಮೀಪ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ. ಈ ಬಗ್ಗೆಯೂ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಅಸೋಸಿಯೇಷನ್ ಸದಸ್ಯ, ಸುಬ್ರಮಣ್ಯ ನಗರದ ನಿವಾಸಿ ಹುದೇರಿ ನಾಗೇಶ್ ಮಾತನಾಡಿ, ಐಟಿಐ ಜಂಕ್ಷನ್ ಬಳಿ ಬೆಳಗ್ಗೆ ಮತ್ತು ಸಂಜೆ ನೂರಾರು ವಿದ್ಯಾರ್ಥಿಗಳು ಸಂಚರಿಸುತ್ತಾರೆ. ಇಂತಹ ಕೇಂದ್ರದಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿರುವ ಪರಿಣಾಮ ಪೊಲೀಸ್ ಇಲಾಖೆ ಸೂಕ್ತ ಪೋಲಿಸ್ ಬೀಟ್ ಹಾಕಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಷನ್ ಸದಸ್ಯರುಗಳಾದ ನಾಟೋಳಂಡ ಪ್ರಕಾಶ್, ಬೊಪ್ಪಂಡ ಸರಳ, ಮಲಚ್ಚೀರ ಕಾರ್ಯಪ್ಪ ಹಾಗೂ ಬೊಮ್ಮಂಡ ಗಣೇಶ್ ಉಪಸ್ಥಿತರಿದ್ದರು.