ಜಿಲ್ಲೆಯಲ್ಲಿ ಬಂದ್ ನೀರಸ

13HSN3
Published on

ಹಾಸನ : ಸರೋಜಿನಿ ಮಹಷಿ ವರದಿ ಜಾರಿ ಹಾಗೂ ಮಹದಾಯಿ ನದಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಹಾಗೂ ವಿವಿಧ ಕನ್ನಡಪರ ಸಂಘಟನೆಗಳು ಗುರುವಾರ ಕರೆ ನೀಡಿದ್ದ ಬಂದ್‌ಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.


ಸಂಘಟನೆ ಮುಖಂಡರು ಬೈಕ್ ರ‌್ಯಾಲಿ ಮೂಲಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಎಂದಿನಂತೆ ವಾಹನ ಸಂಚಾರ, ಶಾಲಾ ಕಾಲೇಜು, ಚಿತ್ರಮಂದಿರ, ಆಸ್ಪತ್ರೆಗಳು ಕಾರ್ಯ ನಿರ್ವಹಿಸಿದವು. ಬೆಳಗ್ಗೆ 9 ಗಂಟೆಗೆ ಹೇಮಾವತಿ ಪ್ರತಿಮೆ ಬಳಿ ಜಮಾಯಿಸಿದ ಹೋರಾಟಗಾರರು ನಗರದ ಮುಖ್ಯ ರಸ್ತೆಯಲ್ಲಿ ಬೈಕ್ ರ‌್ಯಾಲಿ ನಡೆಸಿದರು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕೆಂದು ಆಗ್ರಹಿಸಿದರು.


ವರದಿ ಜಾರಿಗೆ ಒತ್ತಾಯ: ಮಾಜಿ ಸಂಸದೆ, ಲೇಖಕಿ ಸರೋಜಿನಿ ಮಹಿಷಿ ಅವರು 1983ರಲ್ಲಿ ಸಲ್ಲಿಸಿದ್ದ ವರದಿ ಇಂದಿಗೂ ಜಾರಿಯಾಗಿಲ್ಲ. ಕನ್ನಡಿಗರಿಗೆ ಪರಭಾಷಿಕರಿಂದ ಅನ್ಯಾಯವಾಗುತ್ತಿದೆ ಎಂಬುದನ್ನು ದಾಖಲೆ ಸಮೇತ ಸಾಬೀತುಪಡಿಸಿದ ಮಹಿಷಿ ಅವರ ವರದಿಯನ್ನು ಸರ್ಕಾರಗಳು ನಿರ್ಲಕ್ಷಿಸುತ್ತಿವೆ ಎಂದು ಆರೋಪಿಸಿದರು.


ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕು. ಆದರೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸ್ಥಳೀಯರನ್ನು ಸಂಪೂರ್ಣವಾಗಿ ಕಡೆಗಣಿಸಿವೆ. ಬ್ಯಾಂಕಿಂಗ್, ರೈಲ್ವೆ, ಅಂಚೆ ಸೇರಿ ಅನೇಕ ಕ್ಷೇತ್ರಗಳಲ್ಲಿ ಹೊರ ರಾಜ್ಯದವರಿಗೆ ಮನ್ನಣೆ ನೀಡಲಾಗಿದೆ. ಖಾಸಗಿ ಕಾರ್ಖಾನೆಗಳಲ್ಲೂ ಸ್ಥಳೀಯರನ್ನು ಕಡೆಗಣಿಸಲಾಗಿದೆ. ಕರ್ನಾಟಕದ ನೆಲ, ಜಲವನ್ನು ಧಾರಾಳವಾಗಿ ಬಳಸಿಕೊಳ್ಳುವ ಉತ್ತರ ಭಾರತದ ಜನರು ಕನ್ನಡದ ಕುರಿತು ತಾತ್ಸಾರ ಭಾವ ಹೊಂದಿದ್ದಾರೆ. ಇಲ್ಲಿನ ವಿದ್ಯಾವಂತ ಯುವಕರು ಹೊಟ್ಟೆಪಾಡಿಗಾಗಿ ವಲಸೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.


ಹಾಸನದ ಕೈಗಾರಿಕಾ ಪ್ರದೇಶದಲ್ಲಿರುವ ಬಹುತೇಕ ಗಾರ್ಮೆಂಟ್ಸ್‌ಗಳಲ್ಲಿ ಅಸ್ಸಾಂ, ಬಿಹಾರ, ಒಡಿಶಾ, ತಮಿಳುನಾಡು, ಗುಜರಾತಿನ ಜನರನ್ನು ಸೇರಿಸಿಕೊಳ್ಳಲಾಗಿದೆ. ಪರಭಾಷಿಕರಿಗೆ ಉನ್ನತ ಸ್ಥಾನ ಹಾಗೂ ಸ್ಥಳೀಯರಿಗೆ ಡಿ ದರ್ಜೆಯ ನೌಕರಿ ನೀಡಲಾಗಿದೆ. ಭಾಷೆ ಗೊತ್ತಿರದ ಅವರು ನಮ್ಮ ಜನರೊಂದಿಗೆ ಅಸಭ್ಯವಾಗಿ ವರ್ತಿಸುತ್ತಾರೆ. ಸರ್ಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಸರೋಜಿನಿ ಮಹಿಷಿ ವರದಿ ಜಾರಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ರಾಜ್ಯಾದ್ಯಂತ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.


ಉತ್ತರ ಕರ್ನಾಟಕ ಅಭಿವೃದ್ಧಿಪಡಿಸಿ: 1956ರ ಏಕೀಕರಣ ಮೂಲಕ ಮೈಸೂರು ಪ್ರಾಂತ್ಯಕ್ಕೆ ಸೇರಿರುವ ಉತ್ತರ ಕರ್ನಾಟಕವನ್ನು ಸರ್ಕಾರ ಇಂದಿಗೂ ತಾತ್ಸಾರದಿಂದಲೇ ಕಾಣುತ್ತಿದೆ. ಮಹದಾಯಿ ನದಿ ಯೋಜನೆಗೆ ಆಗ್ರಹಿಸಿ ಸಾಕಷ್ಟು ಪ್ರತಿಭಟನೆ ನಡೆದರೂ ಪ್ರಯೋಜನವಾಗಿಲ್ಲ. ಗೋವಾ ಸರ್ಕಾರದ ದ್ವಂದ್ವ ನಿಲುವಿನಿಂದ ರಾಜ್ಯದ ಗದಗ, ಧಾರವಾಡ, ಹಾವೇರಿ, ಬೆಳಗಾವಿ ಜಿಲ್ಲೆಯ ಜನರು ಕುಡಿಯಲು ನೀರಿಲ್ಲದೆ ಪರದಾಡುವಂತಾಗಿದೆ. ಅಧಿಕಾರ ಸಿಕ್ಕರೆ ಮಹದಾಯಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದ ಸಿಎಂ ಯಡಿಯೂರಪ್ಪ ಈಗ ಮೌನ ವಹಿಸಿದ್ದಾರೆ. ಇತರ ಸಚಿವರು ಹಿಂದಿನ ಸರ್ಕಾರಗಳನ್ನು ದೂಷಿಸುತ್ತ ಕಾಲಹರಣ ಮಾಡುತ್ತಿದ್ದಾರೆ. ದಕ್ಷಿಣಕ್ಕೆ ನೀಡಿರುವ ಆದ್ಯತೆಯನ್ನು ಉತ್ತರ ಕರ್ನಾಟಕಕ್ಕೂ ನೀಡಬೇಕು ಎಂದು ಒತ್ತಾಯಿಸಿದರು.


ಜಿಲ್ಲಾಧಿಕಾರಿ ಆರ್. ಗಿರೀಶ್ ಅವರಿಗೆ ಮನವಿ ಸಲ್ಲಿಸಿದರು. ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಜಿಲ್ಲಾಧ್ಯಕ್ಷ ಹರೀಶ್‌ಗೌಡ, ಪ್ರಜಾಶಕ್ತಿ ಸಮಿತಿಯ ಪ್ರವೀಣ್‌ಗೌಡ, ಕಾರ್ಮಿಕ ರಕ್ಷಣಾ ವೇದಿಕೆಯ ರಂಗಸ್ವಾಮಿ, ಮೋಹನ್, ದಿನೇಶ್ ಗೌಡ, ಶರೀಫ್, ಮಧು ಹಾಗೂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net