

ಹಾವೇರಿ: ಬೆಂಗಳೂರಿನ ಗುತ್ತಿಗೆದಾರರೊಬ್ಬರಿಗೆ ಅಸಲಿ ಚಿನ್ನದ ನಾಣ್ಯ ತೋರಿಸಿ, ನಕಲಿ ಕೊಟ್ಟು 3 ಲಕ್ಷ ರೂ. ವಂಚಿಸಿದ ಕುರಿತು ಇಲ್ಲಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ.
ಬೆಂಗಳೂರಿನ ಗುತ್ತಿಗೆದಾರ ಕಂಚರ್ಳ ಹರೀಶ ವೆಂಕಟೇಶ್ವರ ರಾವ್ (48) ಮೋಸ ಹೋದವರು.
ಸುರೇಶ (42) ಹಾಗೂ ಇನ್ನೊಬ್ಬ ಆರೋಪಿ ಮೋಸ ಮಾಡಿದವರು.
ಇವರು ಹರೀಶಗೆ ಮೂರು ದಿನದ ಹಿಂದೆ ಕರೆ ಮಾಡಿ ನಮ್ಮ ಬಳಿ ಚಿನ್ನವಿದೆ, ಅದನ್ನು ಕಡಿಮೆ ಬೆಲೆಗೆ ಕೊಡುತ್ತೇವೆ ಎಂದು ಚಿತ್ರದುರ್ಗಕ್ಕೆ ಕರೆಯಿಸಿಕೊಂಡಿದ್ದಾರೆ. ಮೊದಲಿಗೆ 5 ಸಾವಿರ ರೂ. ಇಸಿದುಕೊಂಡು ಒಂದು ಅಸಲಿ ಚಿನ್ನದ ನಾಣ್ಯ ಕೊಟ್ಟು ಪರಿಶೀಲಿಸಿಕೊಂಡು ಬರಲು ಹೇಳಿದ್ದಾರೆ.
ಹರೀಶ ಅದನ್ನು ಪರಿಶೀಲಿಸಿದ ಬಳಿಕ ಅಸಲಿ ಎಂದು ತಿಳಿದ ಮೇಲೆ ಮಂಗಳವಾರ ವಾಪಸ್ ಆತನನ್ನು ತಾಲೂಕಿನ ಸಂಗೂರ ಗ್ರಾಮದ ಬಳಿ ಕರೆಯಿಸಿಕೊಂಡ ಖದೀಮರು 3 ಲಕ್ಷ ರೂ. ಇಸಿದುಕೊಂಡು 800 ತಾಮ್ರದ ನಾಣ್ಯಗಳನ್ನು ಕೊಟ್ಟು ಮೋಸ ಮಾಡಿದ್ದಾರೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.