

ನಗರದ ಆದರ್ಶ ಶಿಕ್ಷಣ ಸಂಸ್ಥೆಯ ಶ್ರೀ ವಿ ಆರ್ ಕುಷ್ಟಗಿ ಮೆಮೊರಿಯಲ್ ಕಾಲೇಜ್ ಆಫ್ ಕಾಮರ್ಸ್ ನ ಐ ಕ್ಯೂ ಎ ಸಿ ಅಡಿಯಲಿ ಕನ್ನಡ ವಿಭಾಗ ಮತ್ತು ಗದಗ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ಸಹಯೋಗದಲ್ಲಿ ಯುವ ಉದ್ದಿಮೆದಾರರೊಂದಿಗೆ ಸಂವಾದ ಕಾರ್ಯಕ್ರಮ ಹಾಗೂ ಶ್ರೇಷ್ಠ ಉದ್ಯಮಿದಾರ ಪ್ರಶಸ್ತಿ ಪ್ರಧಾನ ಸಮಾರಂಭ ಕಾರ್ಯಕ್ರಮವನ್ನು ಮಹಾವಿದ್ಯಾಲಯದ ಸುವರ್ಣ ಮಹೋತ್ಸವ ಭವನದಲ್ಲಿ ಆಚರಿಸಲಾಯಿತು.
ಆದರ್ಶ ಶಿಕ್ಷಣ ಸಂಸ್ಥೆಯ ಚೇರ್ಮನ್ ಶ್ರೀ ಆನಂದ್ ಪೋತ್ನಿಸ್ ರವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಯಾವುದೇ ವ್ಯಕ್ತಿ ಹೊಸ ಉದ್ಯೋಗ ಆರಂಭಿಸಬೇಕು ಎಂದು ಯೋಚನೆ ಬಂದ ಕೂಡಲೇ ವ್ಯವಹಾರ ಕ್ಷೇತ್ರಕ್ಕೆ ಇಳಿದುಬಿಡಲು ಸಾಧ್ಯವಾಗುವುದಿಲ್ಲ. ಯಾವುದೇ ಹೊಸ ಉದ್ದಿಮೆ ಆರಂಭಕ್ಕೆ ಮುನ್ನ ಪೂರ್ವ ತಯಾರಿ ಬಹಳ ಮುಖ್ಯವಾಗಿರುತ್ತದೆ. ಶುರುಮಾಡಲಿರುವ ವ್ಯವಹಾರದ ಬಗ್ಗೆ ಅಧ್ಯಯನದ ಜೊತೆಗೆ ಖರ್ಚು ವೆಚ್ಚಗಳನ್ನು ಸರಿದೂಗಿಸಲು ಬೇಕಿರುವ ಹಣ ಸಂಗ್ರಹಣೆ, ವ್ಯವಹಾರ ಪ್ರಾರಂಭಿಸಿದ ಮೇಲೆ ಮಾರ್ಕೆಟಿಂಗ್ ಸ್ಟ್ಯಾಟರ್ಜಿಗಳು, ಇದಕ್ಕೂ ಮುನ್ನ ಸ್ಥಳ ಮತ್ತು ಯಾವ ವಯಸ್ಸಿನ ಗ್ರಾಹಕರನ್ನು ಗುರಿಯಾಗಿಸಬೇಕು? ಹೀಗೆ ನಾನಾ ಪ್ರಶ್ನೆಗಳು ಎದುರಾಗುತ್ತವೆ. ಹೊಸ ಉದ್ದಿಮೆ ಆರಂಭಿಸುವ ಮೊದಲು ಸಾಕಷ್ಟು ತಯಾರಿ ಮಾಡಿಕೊಳ್ಳಬೇಕು ರಿಸ್ಕ್ ತೆಗೆದುಕೊಳ್ಳಲು ಸಹ ರೆಡಿಯಿರಬೇಕು, ಜಾಣ್ಮೆಯಿಂದ ಪೂರ್ವ ಲೆಕ್ಕಾಚಾರಗಳೊಂದಿಗೆ ಹೂಡಿಕೆ ಮಾಡಿ ವ್ಯವಹಾರ ಶುರು ಮಾಡಲು ಬಯಸಿದರೆ ಮೊದಲು ಸಣ್ಣ ವ್ಯಾಪಾರದೊಂದಿಗೆ ಪ್ರಾರಂಭಿಸಬೇಕು, ಕಠಿಣ ಪರಿಶ್ರಮ ಆಳವಾದ ಜ್ಞಾನದ ಮೂಲಕ ವ್ಯವಹಾರ ಕ್ಷೇತ್ರದಲ್ಲಿ ಹೊಸ ದಾರಿಯನ್ನ ಹುಡುಕಬಹುದು ಹೀಗೆ ಅನೇಕ ಸಲಹೆಗಳನ್ನು ತಮ್ಮ ಉದ್ಘಾಟನೆ ನುಡಿಗಳಲ್ಲಿ ಹಂಚಿಕೊಂಡರು ವ್ಯವಹಾರ ಕ್ಷೇತ್ರದಲ್ಲಿ ಸಾಧನೆ ಮಾಡಿದ ಯುವ ಉದ್ದಿಮೆದಾರರಿಗೆ ಶ್ರೇಷ್ಠ ಉದ್ದಿಮದಾರ ಪ್ರಶಸ್ತಿಯನ್ನು ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಗದಗ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಹಾಗೂ ಇಂಡಸ್ಟ್ರೀಸ್ ಅಧ್ಯಕ್ಷರು ಮಾನ್ಯ ಶ್ರೀ ಈಶಣ್ಣ ಮುನವಳ್ಳಿ ರವರು ಮಾತನಾಡಿ ಪ್ರತಿ ದೊಡ್ಡ ಆಲೋಚನೆಯು ಸಣ್ಣ ಆಲೋಚನೆಯಿಂದ ಪ್ರಾರಂಭವಾಗುತ್ತದೆ ಎಂದು ಹೇಳಲಾಗುತ್ತದೆ. ವ್ಯವಹಾರದಲ್ಲಿ ಸಣ್ಣ ಪುಟ್ಟ ಯೋಜನೆಗಳು ಬೃಹತ್ ಉದ್ಯಮವಾಗಿ ಬೆಳೆದಿರುವ ಉದಾಹರಣೆಯಿದೆ. ಹೀಗಾಗಿಯೇ ನೀವು ದೊಡ್ಡ ವ್ಯಾಪಾರವನ್ನು ತೆರೆಯಲು ಬಯಸಿದರೆ, ನೀವು ಮೊದಲು ಸಣ್ಣ ವ್ಯಾಪಾರದೊಂದಿಗೆ ಪ್ರಾರಂಭಿಸಬೇಕು. ಹೊಸ ವ್ಯವಹಾರ ಆರಂಭಿಸಲು ತಿಳಿದುಕೊಂಡಿರಬೇಕಾದ ವ್ಯಾಪಾರ ಯೋಚನೆ, ವ್ಯಾಪಾರ ಯೋಜನೆ ,ಹೂಡಿಕೆ ಬಳಿಕವೂ ಖರ್ಚಿಗಾಗಿ ಹಣವನ್ನು ಹೊಂದಿಸುವುದು ,ವ್ಯಾಪಾರದ ಹೆಸರು,ಸ್ಥಳ, ವೆಬ್‌ಸೈಟ್ ರಚಿಸಿ ಇವುಗಳ ಬಗ್ಗೆ ಮೊದಲು ಅಧ್ಯಯನ ಮಾಡಿಕೊಂಡೆ ಹೊಸ ಉದ್ಯಮವನ್ನು ಆರಂಭಿಸಬೇಕೆಂದು ತಮ್ಮ ಮಾತುಗಳಲ್ಲಿ ಹಂಚಿಕೊಂಡರು.
ವೇದಿಕೆ ಮೇಲೆ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಎ ಡಿ ಗೋಡಕಿಂಡಿ, ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ಕೆ ಗಿರಿರಾಜಕುಮಾರ್ ಉಪ ಪ್ರಾಚಾರ್ಯರು ಹಾಗೂ ಐ ಕ್ಯೂ ಎ ಸಿ ಕೋಆರ್ಡಿನೇಟರ್ ಡಾ ವಿ ಟಿ ನಾಯ್ಕರ್, ಗದಗ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಮಹಿಳಾ ಅಧ್ಯಕ್ಷೀಯರಾದ ಶ್ರೀಮತಿ ಸುವರ್ಣ ಮದರಿ ಮಠ ಹಾಗೂ ವ್ಯವಹಾರ ಆಡಳಿತ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ ಲಿಂಗರಾಜ್ ರಶ್ಮಿ , ಗದಗ್ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ನ ಸರ್ವ ಪದಾಧಿಕಾರಿಗಳು ಹಾಗೂ ಬೇರೆ ಬೇರೆ ಕಾಲೇಜಿನ ಶಿಕ್ಷಕ ಹಾಗೂ ಸಿಬ್ಬಂದಿ ವರ್ಗದವರು ಈ ಒಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.