ಮತದಾರರ ಮನವೊಲಿಕೆಗೆ ಆಕಾಂಕ್ಷಿಗಳ ಕಸರತ್ತು

Aspirants' efforts to convince voters
Published on

ರಟ್ಟಿಹಳ್ಳಿ: ಸ್ಥಳೀಯ ಪಟ್ಟಣ ಪಂಚಾಯಿತಿ ಮೊದಲ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಎಲ್ಲ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳು ಮನೆ ಮನೆ ಭೇಟಿ ಮಾಡಿ ಮತದಾರರ ಮನವೊಲಿಕೆಗೆ ಪ್ರಯತ್ನ ಶುರು ಮಾಡಿದ್ದಾರೆ.

ಪಟ್ಟಣ ಪಂಚಾಯಿತಿ 15 ವಾರ್ಡ್‌ಗಳನ್ನು ಹೊಂದಿದೆ. ಜು. 29ರಂದು ಚುನಾವಣೆ ಅಧಿಸೂಚನೆ ಪ್ರಕಟವಾಗಲಿದೆ. ಆ. 5 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಆ. 17ರಂದು ಮತದಾನ ನಡೆಯಲಿದೆ.

ಒಂದೊಂದು ವಾರ್ಡ್‌ನಲ್ಲೂ ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಆಪ್ ಹಾಗೂ ಸ್ವಾಭಿಮಾನಿ ಜನಹಿತ ವೇದಿಕೆಯಿಂದ ಸ್ಪರ್ಧಿಸಲು ಮೂರ್ನಾಲ್ಕು ಜನರು ಉತ್ಸುಕರಾಗಿದ್ದಾರೆ. ಟಿಕೆಟ್ ಕೋರಿ ಪಕ್ಷಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಟಿಕೆಟ್ ಸಿಗುವ ವಿಶ್ವಾಸದಲ್ಲಿ ಹಲವರು ಪ್ರಚಾರ ಶುರು ಮಾಡಿದ್ದಾರೆ.

ಆಯಾ ವಾರ್ಡ್‌ಗಳ ಮೀಸಲಾತಿ ಅನ್ವಯಿಸುವ ಆಕಾಂಕ್ಷಿಗಳು ತಮ್ಮದೇ ಆದ ಲೆಕ್ಕಾಚಾರದಲ್ಲಿದ್ದಾರೆ.

ವಾರ್ಡ್‌ಗಳ ಮತದಾರರ ಪಟ್ಟಿ ಹಿಡಿದು ಸಂಬಂಧಿಗಳು, ತಮ್ಮ, ಇತರ ಸಮುದಾಯ ಮತದಾರರು, ತಮಗೆ ಬರುವ ಮತಗಳೆಷ್ಟು ಎಂದು ಲೆಕ್ಕ ಹಾಕುವ ಜತೆಗೆ ಪ್ರಮುಖರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದಾರೆ. ವಾರ್ಡ್‌ಗಳಲ್ಲಿ ಆಗಬೇಕಾದ ಕೆಲಸ-ಕಾರ್ಯ ಪಟ್ಟಿ ಮಾಡಿಟ್ಟುಕೊಂಡಿರುವ ಆಕಾಂಕ್ಷಿಗಳು, ಹಲವು ದಿನಗಳಿಂದ ಇರುವ ಮೂಲಸೌಕರ್ಯ ಸಮಸ್ಯೆ, ಇತರ ಕೊರತೆಗಳನ್ನು ತಾನು ಆಯ್ಕೆಯಾದರೆ ಬಗೆಹರಿಸುವ ವಾಗ್ದಾನವನ್ನು ಮತದಾರರಿಗೆ ನೀಡುತ್ತಿದ್ದಾರೆ. ಇದಕ್ಕಾಗಿ ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಮತದಾರರ ಮನೆಬಾಗಿಲಿಗೆ ತೆರಳಿ ಬೆವರು ಹರಿಸುತ್ತಿದ್ದಾರೆ.

ಪಪಂ ಆಡಳಿತ ಹಿಡಿಯಲು ಬಿಜೆಪಿಯಲ್ಲೂ ಚಟುವಟಿಕೆಗಳು ಜೋರಾಗಿವೆ. ಇತ್ತೀಚೆಗಷ್ಟೇ ಮಾಜಿ ಸಚಿವ ಬಿ.ಸಿ. ಪಾಟೀಲ ಸಭೆ ನಡೆಸಿದ್ದಾರೆ. ಟಿಕೆಟ್ ಆಕಾಂಕ್ಷಿಗಳಿಗೆ ಅರ್ಜಿ ಸಲ್ಲಿಸಲು ಜು. 25ರವರೆಗೆ ಅವಕಾಶ ನೀಡಲಾಗಿದೆ. ಈಗಾಗಲೇ ಹಲವು ವಾರ್ಡ್‌ಗಳಿಗೆ 35 ಅರ್ಜಿ ಬಂದಿವೆ. ಚುನಾವಣೆ ಉಸ್ತುವಾರಿಯಾಗಿ ನೇಮಕಗೊಂಡಿರುವ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮತ್ತು ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಪಟ್ಟಣದಲ್ಲಿ ಪಕ್ಷದ ಕಾರ್ಯಕರ್ತರ ಸಭೆಯನ್ನೂ ನಡೆಸಿದ್ದಾರೆ.

ಕಾಂಗ್ರೆಸ್‌ನಲ್ಲೂ ರಾಜಕೀಯ ಬೆಳವಣಿಗೆಗಳು ಚುರುಕು ಪಡೆದಿವೆ. ಶಾಸಕ ಯು.ಬಿ. ಬಣಕಾರ ಮತ್ತು ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಕಾರ್ಯಕರ್ತರೊಂದಿಗೆ ಹಲವು ಸಭೆ ನಡೆಸಿದ್ದಾರೆ. ಆಕಾಂಕ್ಷಿಗಳಿಂದ 33ಕ್ಕೂ ಅಧಿಕ ಅರ್ಜಿ ಬಂದಿವೆ. ಚುನಾವಣೆ ನಿರ್ವಹಣಾ ಸಮಿತಿಗೆ ವಸಂತ ದ್ಯಾವಕ್ಕಳವರ ಅವರನ್ನು ನೇಮಿಸಲಾಗಿದೆ. ಟಿಕೆಟ್‌ಗೆ ಅರ್ಜಿ ಸಲ್ಲಿಸಲು ಜು. 25 ಅಂತಿಮ ದಿನ ನಿಗದಿ ಮಾಡಲಾಗಿದೆ.

ಸ್ಥಳೀಯ ಸ್ವಾಭಿಮಾನಿ ಜನಹಿತ ವೇದಿಕೆ ವತಿಯಿಂದ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ವೇದಿಕೆ ಹುರಿಯಾಳುಗಳು ಮತಬೇಟೆಗೆ ತಯಾರಿ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ಇರುವುದರಿಂದ ಸ್ಥಳೀಯ ಜೆಡಿಎಸ್ ಘಟಕದವರು ರಾಜ್ಯದ ನಾಯಕರ ಸೂಚನೆಗೆ ಕಾಯುತ್ತಿದ್ದಾರೆ. ಆಮ್ ಆದ್ಮಿ ಪಾರ್ಟಿಯೂ ಚುನಾವಣೆ ಅಖಾಡಕ್ಕೆ ಧುಮುಕ್ಕಿದ್ದು, ಒಂದು ಅವಕಾಶ ನೀಡುವಂತೆ ಪಟ್ಟಣದ ಎಲ್ಲ ವಾರ್ಡ್‌ಗಳಲ್ಲಿ ಕರಪತ್ರ ಹಂಚುತ್ತಿದ್ದಾರೆ.

ಪಕ್ಷದಲ್ಲಿ ಬಹಳ ಆಕಾಂಕ್ಷಿಗಳಿದ್ದಾರೆ. ಸಂಘಟನೆ, ಸಮುದಾಯವಾರು ಪ್ರಾಶಸ್ತ್ಯ, ಪಕ್ಷ ನಿಷ್ಠೆ, ಗೆಲುವಿನ ಮಾನದಂಡ ಅನುಸರಿಸಿ ಪಕ್ಷದ ವರಿಷ್ಠರು ಅಳೆದು ತೂಗಿ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲಿದ್ದಾರೆ. ಎಲ್ಲ ಕಾರ್ಯಕರ್ತರು, ಮುಖಂಡರು ಒಮ್ಮತದಿಂದ ಚುನಾವಣೆ ನಡೆಸಿ, ಪಪಂ ಆಡಳಿತವನ್ನು ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳಲಾಗುವುದು. ದೇವರಾಜ ನಾಗಣ್ಣನವರ ಬಿಜೆಪಿ ಮಂಡಲ ಅಧ್ಯಕ್ಷ ರಟ್ಟಿಹಳ್ಳಿ ಪಪಂ ಚುನಾವಣೆಗೆ ಟಿಕೆಟ್ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. 15 ವಾರ್ಡ್‌ಗಳಲ್ಲೂ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಚುನಾವಣೆ ಗೆಲುವಿಗೆ ಶಾಸಕ ಯು.ಬಿ. ಬಣಕಾರ ಮತ್ತು ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ನೇತೃತ್ವದಲ್ಲಿ ತಂತ್ರಗಾರಿಕೆ ಮಾಡುತ್ತೇವೆ. ಪಿ.ಡಿ. ಬಸನಗೌಡ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಟ್ಟಿಹಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net