ಹುಲ್ಲಹಳ್ಳಿ ಗ್ರಾಮಕ್ಕೆ ರಸ್ತೆ ಭಾಗ್ಯ: ಮೂರು ದಶಕದ ನಂತರ ಡಾಂಬರೀಕರಣ

Asphalting in Hullahalli village after three decades Mandya
Published on

ಮಂಡ್ಯ: ಬರೋಬರಿ ಮೂರು ದಶಕದ ಬಳಿಕ ಮಂಡ್ಯ ವಿಧಾನಸಭಾ ಕ್ಷೇತ್ರದ ಹುಲ್ಲಹಳ್ಳಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಶಾಸಕ ರವಿಕುಮಾರ್ ಗಣಿಗ ಅವರನ್ನು ಅಭಿನಂದಿಸಿದರು.

ಬಸರಾಳು ಹೋಬಳಿಯ ಹುಲ್ಲಹಳ್ಳಿ ಗ್ರಾಮದಿಂದ ನಾಯಕನಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು 1 ಕೋಟಿ ರೂ ವೆಚ್ಚದಲ್ಲಿ ಹಾಗೂ ಹುಲ್ಲಹಳ್ಳಿ ಗ್ರಾಮದ ಪರಿಮಿತಿಯಲ್ಲಿ 12 ಲಕ್ಷ ರೂ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ರವಿಕುಮಾರ್ ಗಣಿಗ ಭೂಮಿ ಪೂಜೆ ನೆರವೇರಿಸಿದರು. ಈ ವೇಳೆ ಅವರನ್ನು ಅಭಿನಂದಿಸಿದ ಗ್ರಾಮಸ್ಥರು, ಮೂವತ್ತು ವರ್ಷದ ಹಿಂದೆ ರಸ್ತೆ ಡಾಂಬರೀಕರಣ ನಡೆದಿತ್ತು. ಈವರೆಗೆ ರಸ್ತೆ ಅಭಿವೃದ್ಧಿ ಮಾಡುವ ಕೆಲಸವಾಗಿರಲಿಲ್ಲ. ಇದರಿಂದ ಸ್ಥಳೀಯರಿಗೆ ಸಾಕಷ್ಟು ತೊಂದರೆಯಾಗಿತ್ತು. ಇದನ್ನು ಮನಗಂಡು ಶಾಸಕರು ಅಭಿವೃದ್ಧಿಗೆ ಚಾಲನೆ ನೀಡಿದ್ದಾರೆ. ಇದರೊಂದಿಗೆ ಗ್ರಾಮಸ್ಥರಿಗೆ ದೊಡ್ಡ ಮಟ್ಟದ ಅನುಕೂಲವಾಗಲಿದೆ ಎಂದರು.

ಬಸರಾಳು ಹೋಬಳಿಗೆ ಕಾವೇರಿ ನೀರು ಹರಿಸುವ ನಿಟ್ಟಿನಲ್ಲಿಯೂ ಶಾಸಕರು ಯೋಜನೆ ರೂಪಿಸುತ್ತಿರುವುದು ಶ್ಲಾಘನೀಯ. ಸಮರ್ಪಕ ನೀರಾವರಿ ಸೌಲಭ್ಯವಿಲ್ಲದ ಪರಿಣಾಮ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದೆ. ಹೇಮಾವತಿ ನೀರು ನಮ್ಮ ಭಾಗಕ್ಕೆ ಸರಿಯಾಗಿ ತಲುಪದ ಪರಿಣಾಮ ಸಮಸ್ಯೆಯಾಗುತ್ತಿದೆ. ಶ್ರೀರಂಗಪಟ್ಟಣದಿಂದ ಕಾವೇರಿ ನೀರು ಪೂರೈಕೆ ಮಾಡಿದರೆ ನೀರಾವರಿ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ. ಈ ನಿಟ್ಟಿನಲ್ಲಿ ಶಾಸಕ ರವಿಕುಮಾರ್ ಗಣಿಗ ಅವರೊಟ್ಟಿಗೆ ನಾವು ಸದಾ ಇರುತ್ತೇವೆ ಎಂದು ಹೇಳಿದರು.

ಬಳಿಕ ಮಾತನಾಡಿದ ರವಿಕುಮಾರ್ ಗಣಿಗ, ಹುಲ್ಲಹಳ್ಳಿಯಲ್ಲಿ ಹಲವು ವರ್ಷಗಳಿಂದ ರಸ್ತೆ ಡಾಂಬರೀಕರಣವಾಗಿರಲಿಲ್ಲ. ಪರಿಣಾಮ ಗ್ರಾಮದ ಜನರು ಹೈರಾಣಾಗಿದ್ದರು. ಈ ಹಿನ್ನೆಲೆಯಲ್ಲಿ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ಮುಂದಿನ ದಿನದಲ್ಲಿ ಹಂತ ಹಂತವಾಗಿ ಅಭಿವೃದ್ಧಿ ಕೆಲಸ ಮಾಡಲಾಗುವುದು ಎಂದರು.

ಮುಖಂಡರಾದ ರವಿ ಭೋಜೇಗೌಡ, ಪ್ರದೀಪ್, ಕೃಷ್ಣೇಗೌಡ, ಮಣಿ ಇತರರಿದ್ದರು. ಇದೇ ವೇಳೆ ಬಸರಾಳು ಹೋಬಳಿಯ ಗಣಿಗ ಗ್ರಾಮದಲ್ಲಿ 1 ಕೋಟಿ ರೂ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಗೆ ಭೂಮಿ ಪೂಜೆ ನೆರವೇರಿಸಲಾಯಿತು. ಅಂತೆಯೇ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net