

ಮಂಗಳೂರು: ಮಾಂಡ್ ಸೊಭಾಣ್‌ನ ಚೊಚ್ಚಲ ಚಲನಚಿತ್ರ ಅಸ್ಮಿತಾಯ್ (ಅಸ್ಮಿತೆ) ನ ಪೋಸ್ಟರ್ ಬಿಡುಗಡೆ ಶಕ್ತಿನಗರದ ಕಲಾಂಗಣದಲ್ಲಿ ಭಾನುವಾರ ನಡೆಯಿತು.
ತುಳು ಸಿನೆಮಾ ನಿರ್ದೇಶಕ ವಿಜಯ್‌ಕುಮಾರ್ ಕೊಡಿಯಾಲ್ ಬೈಲ್ ಮತ್ತು ಕೊಂಕಣಿ ನಟ ನಿರ್ಮಾಪಕ ಪ್ರಿನ್ಸ್ ಜೇಕಬ್ ಗೋಡೆಗೆ ಚಿತ್ರದ ಪೋಸ್ಟರ್ ಅಂಟಿಸುವ ಮೂಲಕ ವಿಭಿನ್ನ ರೀತಿಯಲ್ಲಿ ಬಿಡುಗಡೆ ಮಾಡಿದರು. ನಂತರ ಮಾತನಾಡಿದ ವಿಜಯಕುಮಾರ್, ಕೊಂಕಣಿ ಕ್ರೈಸ್ತರು ತಮ್ಮ ಚರ್ಚ್ ವಠಾರಗಳಲ್ಲಿ ತುಳು ನಾಟಕಗಳನ್ನು ಪ್ರದರ್ಶಿಸಿ ರಂಗಭೂಮಿಯ ಬೆಳವಣಿಗೆಗೆ ಕಾರಣರಾದವರು. ತುಳು ಚಿತ್ರ ರಂಗ ಬೆಳೆದಂತೆ ಕೊಂಕಣಿ ಸಿನೆಮಾ ಕೂಡ ಬೆಳೆಯಲಿ ಎಂದು ಹಾರೈಸಿದರು.
ಉದ್ಯಮಿಗಳಾದ ರೊಯ್ ಕ್ಯಾಸ್ತೆಲಿನೊ, ರೋಹನ್ ಮೊಂತೇರೊ, ವಿನ್ಸೆಂಟ್ ಕುಟಿನ್ಹಾ, ಒಲ್ವಿನ್ ರಾಡ್ರಿಗಸ್ ಮಾಂಡ್ ಸೊಭಾಣ್ ಪದಾಧಿಕಾರಿಗಳಾದ ಲುವಿ ಪಿಂಟೊ, ಸ್ಟ್ಯಾನಿ ಆಲ್ವಾರಿಸ್, ಕಿಶೋರ್ ಫನಾರ್ಂಡಿಸ್ ಉಪಸ್ಥಿತರಿದ್ದರು,
ಚಿತ್ರದ ಬಗ್ಗೆ ಮಾಹಿತಿ ನೀಡಿದ ಎರಿಕ್ ಒಝೇರಿಯೊ, ಕೊಂಕಣಿ ಅಸ್ಮಿತೆಯ ಹುಡುಕಾಟವಿರುವ, ಕೊಂಕಣಿ ಜನರ ವಲಸೆಯ ಬಗ್ಗೆ ಒಳ ನೋಟಗಳಿರುವ ಈ ಚಲನ ಚಿತ್ರ ಎಲ್ಲ ವರ್ಗದ ಜನರಿಗೆ ಆಪ್ತವೆನಿಸಲಿದೆ. ಸೆಪ್ಟೆಂಬರ್ ಒಳಗೆ ಚಿತ್ರ ಬಿಡುಗಡೆಗೊಳಿಸುವ ಯೋಜನೆ ಇದೆ ಎಂದರು. ನಾಯಕ ನಟ ಆಶ್ವಿನ್ ಡಿಕೋಸ್ತಾ ಮತ್ತು ನಾಯಕ ನಟಿ - ಸೋನಲ್ ಆಗ್ನೆಸ್ ಮೊಂತೇರೊ ಅವರನ್ನು ಪರಿಚಯಿಸಲಾಯಿತು. ನಂತರ ಚಿತ್ರದ ಪ್ರಮುಖ ತಾಂತ್ರಿಕ ವರ್ಗವನ್ನು ಪರಿಚಯಿಸಲಾಯಿತು.
ಪ್ರಸಿದ್ಧ ಗಾಯಕಿ ಲುಲು ಫೊರ್ಟೆಸ್ ಅವರಿಂದ ಮಧುರ ಹಾಡುಗಳ ಪ್ರಸ್ತುತಿ ನಡೆಯಿತು. ರೋಶನ್ ಬೇಳ, ಸಂಜಿತ್ ರೊಡ್ರಿಗಸ್, ಸ್ಟಾಲಿನ್ ಡಿಸೋಜ, ರಸೆಲ್ ಮತ್ತು ಪ್ರಜ್ವಲ್ ಪ್ರೊಂಟೆರೊ ಸಂಗೀತದಲ್ಲಿ ಸಹಕರಿಸಿದರು. ಅರುಣ್ ರಾಜ್ ರೊಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು