

ಮೈಸೂರು: ಅಸ್ಮಿತಾ ಖೇಲೋ ಇಂಡಿಯಾ ವುಮೆನ್ಸ್ ಸಿಟಿ ಲೀಗ್- 2025ರ ಮೈಸೂರಿನ ಆವೃತ್ತಿಯು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಭಾನುವಾರ ಯಶಸ್ವಿಯಾಗಿ ನಡೆಯಿತು.
ಈ ಕೂಟದಲ್ಲಿ 73 ಮಹಿಳಾ ಸೈಕ್ಲಿಂಗ್ ಸ್ಪರ್ಧಿಗಳು ಭಾಗವಹಿಸಿದ್ದು, 18 ವರ್ಷದೊಳಗಿನವರ ವಿಭಾಗ, ಅಮೆಚುರ್ ಮಹಿಳಾ ವಿಭಾಗ ಮತ್ತು ಎಲೈಟ್ ಮಹಿಳಾ ವಿಭಾಗದಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು.
ಲಲಿತಾದ್ರಿಪುರದ ಸಿಲಿಕಾನ್ ಸಿಟಿ ಇಂಟರ್‌ನ್ಯಾಷನಲ್ ಸ್ಕೂಲ್ ಕಾರ್ಯಕ್ರಮದ ಆತಿಥೇಯದಲ್ಲಿ ಮೈಸೂರು ಜಿಲ್ಲಾ ಅಮೆಚುರ್ ಸೈಕ್ಲಿಂಗ್ ಅಸೋಸಿಯೇಷನ್ ಆಯೋಜಿಸಲಾಗಿತ್ತು. ಕರ್ನಾಟಕ ಅಮೆಚುರ್ ಸೈಕ್ಲಿಂಗ್ ಅಸೋಸಿಯೇಷನ್, ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ, ಭಾರತೀಯ ಕ್ರೀಡಾ ಪ್ರಾಧಿಕಾರ ಹಾಗೂ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯದಿಂದ ಸಹಕಾರ ನೀಡಲಾಗಿತ್ತು.
ಖೇಲೋ ಇಂಡಿಯಾದ ಬಹುಮಾನ ವಿಜೇತೆ ಹಾಗೂ ಕರ್ನಾಟಕದ ರಾಜ್ಯ ಬಾಸ್ಕೆಟ್‌ಬಾಲ್ ಚಾಂಪಿಯನ್ ಎಂ.ಕೆ.ಯಶಸ್ವಿನಿ ಅವರು ಅತಿಥಿಯಾಗಿ ಭಾಗವಹಿಸಿದ್ದರು. ಸಿಲಿಕಾನ್ ಸಿಟಿ ಇಂಟರ್‌ನ್ಯಾಷನಲ್ ಸ್ಕೂಲ್‌ನ ಪ್ರಾಂಶುಪಾಲೆ ದೀಪ್ತಿ, ಕರ್ನಾಟಕ ಹಾಗೂ ಮೈಸೂರು ಅಮೆಚುರ್ ಸೈಕ್ಲಿಂಗ್ ಅಸೋಸಿಯೇಷನ್‌ನ ಸದಸ್ಯರು ಇದ್ದರು.
ಬಹುಮಾನ ವಿಜೇತರು:
18 ವರ್ಷದೊಳಗಿನ ಮಹಿಳೆಯರ ವಿಭಾಗದಲ್ಲಿ ಎಂ.ಬಿ.ಸೇತುಲಕ್ಷ್ಮಿ, ಆರಾಧನಾ ಸಂತೋಷ್, ಎನ್.ಸಿ.ಮೈಝಾ ಬ್ಯಾಕರ್ ಬಹುಮಾನ ಪಡೆದರು. ಎಲೈಟ್ ಮಹಿಳೆಯರ ವಿಭಾಗದಲ್ಲಿ ಗ್ಲಿಯೋನ್ನಾ ಡಿಸೋಜಾ, ಎನ್.ಎಚ್.ನಾಗಶ್ರೀ, ಕಾರೆಲ್ ಮಾರ್ಷಲ್, ಅಮೆಚುರ್ ಮಹಿಳೆಯರ ವಿಭಾಗದಲ್ಲಿ ನಮ್ರತಾ ಶ್ರೀಧರ್, ಕೆ.ಎಂ.ವತ್ಸಲಾ, ಲಕ್ಷ್ಮೀದೇವಿ ಗೆಲುವು ಮುಡಿಗೇರಿಸಿಕೊಂಡರು.