

ಹೊಳೆನರಸೀಪುರ: ಬಡವರಿಗೆ ಚಿಕಿತ್ಸೆ ನೀಡಲು ಹಣಕ್ಕೆ ಒತ್ತಾಯಿಸಿದರೆ ಒಳ್ಳೆಯದು ಆಗುವುದಿಲ್ಲ, ದೇವರಿಗಾದರೂ ಹೆದರಿ ಕೆಲಸ ಮಾಡುವಂತೆ ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಶಾಸಕ ಎಚ್.ಡಿ.ರೇವಣ್ಣ ತಾಕೀತು ಮಾಡಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಗುರುವಾರ ಆಯೋಜಿಸಿದ್ದ ವೈದ್ಯರು, ನರ್ಸ್‌ಗಳು ಹಾಗೂ ಸಿಬ್ಬಂದಿ ಸಭೆಯಲ್ಲಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವ್ಯಾಪಕ ದೂರುಗಳು ಬರುತ್ತಿವೆ. ಆಸ್ಪತ್ರೆಗೆ ಇತ್ತೀಚೆಗೆ ನೇಮಕವಾಗಿರುವ ಸ್ತ್ರೀರೋಗ ತಜ್ಞರೊಬ್ಬರು ಹೆರಿಗೆ ಮಾಡಿಸಲು ಇಂತಿಷ್ಟೇ ಹಣ ನೀಡಬೇಕು, ಇಲ್ಲದಿದ್ದರೆ ಹೆರಿಗೆ ಮಾಡಲ್ಲ ಎನ್ನುತ್ತಿದ್ದಾರಂತೆ. ಇದೆಲ್ಲ ಇಲ್ಲಿ ನಡೆಯಲ್ಲ ಎಂದು ಹೇಳಿದರು.
ಆಸ್ಪತ್ರೆಯಲ್ಲಿ ಔಷಧಗಳು ಸಿಗುತ್ತಿಲ್ಲ ಎಂದು ಕೆಲ ದಿನಗಳ ಹಿಂದೆ ಎಲ್ಲ ಪತ್ರಿಕೆಗಳಲ್ಲೂ ವರದಿ ಪ್ರಕಟವಾಗಿತ್ತು. ಇದನ್ನು ಪರಿಶೀಲನೆ ನಡೆಸಿ ಸರಿಪಡಿಸಿ ಎಂದು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಧನಶೇಖರ್‌ಗೆ ಸೂಚಿಸಿದರು.
ರಾತ್ರಿ ಪಾಳಿಯಲ್ಲಿ ತರಬೇತಿ ವೈದ್ಯರೇ ಇರುತ್ತಾರೆ. ಕರ್ತವ್ಯನಿರತ ವೈದ್ಯರು ಜತೆಯಲ್ಲಿರಬೇಕು. ಅವರ ಜತೆ ದಾದಿಯರು ಕರ್ತವ್ಯದಲ್ಲಿ ಇರುವಂತೆ ನೋಡಿಕೊಳ್ಳಿ. ನೀವು ನರ್ಸಿಂಗ್ ಕಾಲೇಜಿನಿಂದ ವಿದ್ಯಾರ್ಥಿಗಳನ್ನು ಕರ್ತವ್ಯಕ್ಕೆ ನಿಯೋಜಿಸಿ ಎಂದು ಸರ್ಕಾರಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್ ಅವರಿಗೆ ಸೂಚಿಸಿದರು.
ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಆಸ್ಪತ್ರೆಗೆ ಬೇಕಾದ ಸಿ.ಟಿ.ಸ್ಕ್ಯಾನ್, ಡಯಾಲಿಸಿಸ್ ಸೌಲಭ್ಯ, ಅಗತ್ಯಕ್ಕೆ ತಕ್ಕಷ್ಟು ಕೊಠಡಿಗಳು, ವೈದ್ಯರನ್ನು ನಿಯೋಜಿಸಲಾಗಿದೆ. ಇಷೆಲ್ಲಾ ಸೌಲಭ್ಯಗಳನ್ನು ನೀಡಿದ್ದೇನೆ. ಬಡರೋಗಿಗಳಿಗೆ ಉತ್ತಮ ಚಿಕಿತ್ಸೆ ಮತ್ತು ಔಷಧ ನೀಡಿ ಆಸ್ಪತ್ರೆಗೆ ಒಳ್ಳೆಯ ಹೆಸರು ತನ್ನಿ ಎಂದರು.
ಕೆಲ ವೈದ್ಯರು ರೋಗಿಗಳಿಗೆ ಅತ್ಯುತ್ತಮ ಚಿಕಿತ್ಸೆ ನೀಡುತ್ತಿದ್ದಾರೆ. ನಾನು ಎಲ್ಲ ವೈದ್ಯರಿಂದ ಇಂತಹ ಸೇವೆಯನ್ನೇ ನಿರೀಕ್ಷಿಸುತ್ತೇನೆ. ಉತ್ತಮ ಸೇವೆ ನೀಡಿ ನಮ್ಮ ಆಸ್ಪತ್ರೆಯ ಘನತೆಯನ್ನು ಹೆಚ್ಚಿಸಿ ಎಂದು ಸಲಹೆ ನೀಡಿದರು.
ಆರೋಗ್ಯ ರಕ್ಷಾ ಸಮಿತಿ ಸದಸ್ಯ ಎಚ್.ವಿ. ಸುರೇಶ್ ಕುಮಾರ್ ಮಾತನಾಡಿ, ಇತ್ತೀಚೆಗೆ ಸುಬ್ರಹ್ಮಣ್ಯ ಎಂಬುವರು ಎದೆನೋವು ಎಂದು ಬಂದಾಗ ತರಬೇತಿ ವೈದ್ಯರೊಬ್ಬರು ಸರಿಯಾಗಿ ಪರಿಶೀಲಿಸದೆ ಗ್ಯಾಸ್ಟ್ರಿಕ್ ಎಂದು ಮಾತ್ರೆ ಕೊಟ್ಟು ಕಳುಹಿಸಿದರು. ಅವರು ಮನೆಗೆ ಹೋಗುತ್ತಿದ್ದಂತೆ ಮೃತಪಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಇತ್ತೀಚೆಗೆ ರಾತ್ರಿ ವೇಳೆ ಆಸ್ಪತ್ರೆಗೆ ಬಂದ ರೋಗಿಗೆ ಟಿ.ಟಿ. ಇಂಜೆಕ್ಷನ್ ಇಲ್ಲ ಎಂದು ವಾಪಸ್ ಕಳುಹಿಸಿದ್ದಾರೆ. ಕೆಲ ದಾದಿಯರು ರೋಗಿಗಳೊಂದಿಗೆ ಸಮಾಧಾನವಾಗಿ ಮಾತನಾಡದೆ ಸದಾ ರೇಗಾಡುತ್ತಿರುತ್ತಾರೆ ಎಂದು ದೂರಿದರು.
ಶಾಸಕ ಎಚ್.ಡಿ.ರೇವಣ್ಣ ಮಾತನಾಡಿ, ಮುಂದೆ ಇಂಥ ದೂರುಗಳು ಬರದಂತೆ ನೋಡಿಕೊಳ್ಳಿ ಎಂದು ವೈದ್ಯರು ಹಾಗೂ ದಾದಿಯರಿಗೆ ಸೂಚಿಸಿದರು.
ಟಿಎಚ್‌ಒ ಡಾ.ರಾಜೇಶ್, ವೈದ್ಯರಾದ ಸೆಲ್ವಕುಮಾರ್, ದಿನೇಶ್, ರಾಮು, ಸತ್ಯಪ್ರಕಾಶ್, ನಾಗೇಂದ್ರ, ರೇಖಾ, ಅಜಯ್, ಕುಸುಮಾ, ಅಶ್ವಥಿ, ಲೋಕೇಶ್, ಬಾಲಕೃಷ್ಣ, ಸಹಾಯಕ ಆಡಳಿತಾಧಿಕಾರಿ ಚಿನ್ನಮ್ಮ ಇತರರು ಇದ್ದರು.