ಆಸಿಲ್ ಕೋಳಿ ಉತ್ಪಾದನೆ ಸ್ಥಗಿತ, ಕುಕ್ಕುಟ ವಿಭಾಗ ಸುಧಾರಣೆಗೆ ನಿರಾಸಕ್ತಿ * ನಾಟಿ, ಗಿರಿರಾಜಕ್ಕೆ ಸೀಮಿತವಾದ ಕೇಂದ್ರ

koli
Published on

ಪ್ರಕಾಶ್ ಮಂಜೇಶ್ವರ ಮಂಗಳೂರು

ಸಾಕಷ್ಟು ಬೇಡಿಕೆ ಇದ್ದರೂ ನಾಟಿ ಆಸಿಲ್ ಕೋಳಿ ಮರಿಗಳ ಉತ್ಪಾದನೆಯನ್ನು ಕಡಬ ಕೊಲ ಜಾನುವಾರು ಸಂವರ್ಧನಾ ತರಬೇತಿ ಕೇಂದ್ರದ ಕುಕ್ಕುಟ ವಿಸ್ತರಣಾ ಕೋಳಿ ಮರಿ ಉತ್ಪಾದನೆ ಘಟಕ ಸ್ಥಗಿತಗೊಳಿಸಿದೆ.

ಬೆಂಗಳೂರಿನ ಹೇಸರಘಟ್ಟದ ಕೇಂದ್ರೀಯ ಕುಕ್ಕುಟ ಅಭಿವೃದ್ಧಿ ಸಂಸ್ಥೆಯು ಆಸಿಲ್ ಮರಿಗಳನ್ನು ತಮಿಳುನಾಡು. ಕೇರಳ, ಆಂಧ್ರಪ್ರದೇಶ, ಗುವಾಹಟಿ ಮುಂತಾದ ಕಡೆ ಕಳುಹಿಸುತ್ತಿದ್ದು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ನೇರ ಪೂರೈಕೆ ವ್ಯವಸ್ಥೆ ಇರಲಿಲ್ಲ. ಅಗತ್ಯವಿರುವವರು ಬೆಂಗಳೂರಿನಿಂದ ಸ್ವಂತ ವಾಹನ ವ್ಯವಸ್ಥೆಯಲ್ಲಿ ತರಿಸಿಕೊಳ್ಳಬೇಕಾಗಿತ್ತು.

ಎರಡು ವರ್ಷಗಳ ಹಿಂದೆ ಹೇಸರಘಟ್ಟದಿಂದ ಒಂದು ದಿನ ವಯಸ್ಸಿನ 800 ಆಸಿಲ್ ಮರಿಗಳನ್ನು ತಂದು ಕೊಲ ಾರ್ಮ್‌ನಲ್ಲಿ ಪೇರಂಟ್ ಬರ್ಡ್ (ಮರಿ ಮಾಡುವ ಸಲುವಾಗಿ ಸಾಕುವ ಕೋಳಿಗಳು) ಆಗಿ ಬೆಳೆಸಲಾಗಿತ್ತು. ಈ ಮಾತೃಕೋಳಿಗಳಿಂದ ದೊರೆತ ಮೊಟ್ಟೆಗಳಿಂದ ಮರಿ ಪಡೆದು ರೈತರಿಗೆ ಹಂಚಿಕೆ ಮಾಡಲಾಗಿತ್ತು.

ಆಸಿಲ್ ಮಾತೃಕೋಳಿಗಳ ಅವಧಿ ಮುಗಿದ ಬಳಿಕ ಹೊಸ ಆಸಿಲ್ ಹೊಸ ಮಾತೃಕೋಳಿಗಳ ಬ್ಯಾಚನ್ನು ಕೊಲ ಕೇಂದ್ರ ಸಿದ್ಧಪಡಿಸಬೇಕಿತ್ತಾದರೂ ಇದಕ್ಕೆ ಆಸಕ್ತಿ ತೋರಿಸಿಲ್ಲ. ಬದಲಿಯಾಗಿ ಬೇರೆ ನಾಟಿಕೋಳಿ ಬ್ಯಾಚನ್ನು ಸಿದ್ಧಪಡಿಸುತ್ತಿದೆ. ಸಿದ್ಧಪಡಿಸುತ್ತಿರುವ 620 ಹೊಸ ನಾಟಿ ಮಾತೃಕೋಳಿಗಳಿಗೆ 19 ವಾರ ಪ್ರಾಯ ತುಂಬಿದ್ದು, ರೈತರಿಗೆ ಮರಿಗಳನ್ನು ವಿತರಿಸಲು ಇನ್ನು ಕನಿಷ್ಠ ಒಂದೂವರೆ ತಿಂಗಳು ಕಾಯಬೇಕು.

ಪ್ರಸ್ತುತ ಕೊಲ ಾರ್ಮ್‌ನಲ್ಲಿ ರೈತರಿಗೆ ವಿತರಿಸಲು ಗಿರಿರಾಜ ಕೋಳಿಯ ಒಂದು ದಿನದ ಮರಿಗಳು ಮಾತ್ರ ಲಭ್ಯ.

ಆಯುಕ್ತಾಲಯ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಅಧೀನದಲ್ಲಿರುವ ಕೊಲ ಾರ್ಮ್‌ನಲ್ಲಿ ರೈತರಿಗೆ ಆವಶ್ಯವಿರುವ ತಳಿಗಳನ್ನು ಒದಗಿಸಲು ಅವಕಾಶವಿದ್ದರೂ ಕೇಂದ್ರ ಈ ಬಗ್ಗೆ ಗಮನಹರಿಸುತ್ತಿಲ್ಲ. ಮೊಟ್ಟೆ ಕೋಳಿಗಳಿಗೆ ಹೆಸರಾದ ಸ್ವರ್ಣಧಾರ ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಬೇಡಿಕೆ ಹೊಂದಿರುವ ಆಂಧ್ರ ಪ್ರದೇಶ ಮೂಲದ ನಾಟಿ ಫೈಟರ್ ಕೋಳಿಗಳಿಗೆ ಬೇಡಿಕೆ ಇರುವಾಗಲೇ ಕೇಂದ್ರವು ವಿತರಣೆ ನಿಲ್ಲಿಸಿತ್ತು.

----------------

* ಗುಣಮಟ್ಟವೂ ಕಳಪೆ?:

ಸ್ವರ್ಣಧಾರ, ಫೈಟರ್, ಆಸಿಲ್ ಮತ್ತಿತರ ತಳಿಗಳ ಗುಣಮಟ್ಟದ ಕೋಳಿಮರಿಗಳ ವಿತರಣೆಗೆ ಕೊಲ ಜಾನುವಾರು ಸಂವರ್ಧನಾ ತರಬೇತಿ ಕೇಂದ್ರದ ಕುಕ್ಕುಟ ವಿಸ್ತರಣಾ ಕೋಳಿ ಮರಿ ಉತ್ಪಾದನೆ ಘಟಕ ಆಸಕ್ತಿ ತೋರಿಸುತ್ತಿಲ್ಲ. ಬದಲಿಗೆ ಗುಣಮಟ್ಟವಿಲ್ಲದ ಸಾಮಾನ್ಯ ನಾಟಿಕೋಳಿಗಳ ವಿತರಣೆಗೆ ಕೇಂದ್ರ ಸಜ್ಜಾಗಿದೆ. ಕೊಲ ಕೇಂದ್ರದಲ್ಲಿ ಈ ಹಿಂದೆ ವಿತರಣೆಯಾಗುತ್ತಿದ್ದ ನಾಟಿ ಕೋಳಿಗಳು ಕರಾವಳಿಯ ನಾಟಿ ಕೋಳಿಗಳಿಗೆ ಹೋಲಿಸಿದರೆ ಗುಣಮಟ್ಟ ಕಡಿಮೆ. ಹೆಬ್ಬಾಳ ಪಶುವೈದ್ಯಕೀಯ ಕಾಲೇಜಿನಿಂದ ತಂದ ಮರಿಗಳಿಂದ ಮಾತೃಕೋಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇವುಗಳಲ್ಲಿ ಹೆಚ್ಚಿನವುಗಳು ಮಾಂಸಕ್ಕೆ ಮಾತ್ರ ಸೂಕ್ತವಾಗಿದೆ. ಸರ್ಕಾರದಿಂದ ಪೂರೈಕೆಯಾಗುವ ನಾಟಿಕೋಳಿ ಮರಿಗಳ ಗುಣಮಟ್ಟ ವೃದ್ಧಿ ಕಡೆ ಹೆಚ್ಚಿನ ಗಮನ ನೀಡಬೇಕಾಗಿದೆ. ಕಳೆದ ಅವಧಿಯಲ್ಲಿ ವಿತರಣೆಯಾದ ಅಸಿಲ್ ಕೋಳಿ ಮರಿಗಳಲ್ಲಿ ಕೂಡ ಬೆರಕೆ ತಳಿಗಳು ಎನ್ನುವ ದೂರುಗಳು ಇದ್ದವು.

--- ಕೋಟ್ ---

ಪ್ರಸ್ತುತ ಕೊಲ ಾರ್ಮ್‌ನಲ್ಲಿ ನಾಟಿ ಕೋಳಿ ಮತ್ತು ಗಿರಿರಾಜ ಕೋಳಿ ಮರಿಗಳು ಇವೆ. ಉತ್ಪಾದನೆಯಾಗುವ ಕೋಳಿ ಮರಿಗಳಿಗೆ ಬೇಡಿಕೆಯಿದ್ದು, ಸುತ್ತಲಿನ ಊರುಗಳ ಜನರು ಹೆಚ್ಚಿನ ಪ್ರಮಾಣದಲ್ಲಿ ಕೊಂಡೊಯ್ಯುತ್ತಾರೆ.

- ಡಾ.ಪ್ರಸನ್ನ ಹೆಬ್ಬಾರ್, ಉಪ ನಿರ್ದೇಶಕರು (ಪ್ರಭಾರ), ಜಾನುವಾರು ಸಂವರ್ಧನಾ ತರಬೇತಿ ಕೇಂದ್ರ, ಕೊ

............

ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳ ನಾಟಿಕೋಳಿಗಳ ಗುಣಮಟ್ಟಕ್ಕೆ ಹೋಲಿಸಿದರೆ ಕೊಲ ಫಾರ್ಮ್‌ನಲ್ಲಿ ದೊರೆಯುವ ನಾಟಿ ಕೋಳಿಗಳು ಸ್ಥಳೀಯ ರೈತರನ್ನು ಆಕರ್ಷಿಸುವಂತೆ ಇಲ್ಲ. ಬೆಂಗಳೂರಿನಿಂದ ತಂದ ನಾಟಿಕೋಳಿ ಮೊಟ್ಟೆಗಳಿಂದ ಮರಿ ಮಾಡಿ ವಿತರಿಸುವುದಕ್ಕಿಂತ, ಕರಾವಳಿ ಭಾಗದಲ್ಲೇ ಉತ್ತಮ ಜಾತಿಯ ಕೋಳಿಗಳನ್ನು ಆಯ್ದು ಸಂಗ್ರಹಿಸಿ ಅವುಗಳ ಮೊಟ್ಟೆಗಳ ಮರಿ ಮಾಡಿದರೆ ಸ್ಥಳೀಯರಿಗೆ ಮಾತ್ರವಲ್ಲ, ಹೊರ ಜಿಲ್ಲೆಯವರಿಗೂ ಇಲ್ಲಿಂದ ಉತ್ತಮ ಜಾತಿಯ ಕೋಳಿಗಳನ್ನು ನೀಡಬಹುದು.

- ಓರ್ವ ಕೃಷಿಕ, ಬಿ.ಸಿ.ರೋಡು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net