

ಪ್ರಕಾಶ್ ಮಂಜೇಶ್ವರ ಮಂಗಳೂರು
ರಾಜ್ಯ ಸರ್ಕಾರ ಈವರೆಗೆ ವಿವಿಧ ಯೋಜನೆಗಳ ಮೂಲಕ ಮೊಟ್ಟೆ ಕೋಳಿಗಳಾದ ಸ್ವರ್ಣಧಾರ ಮತ್ತು ಗಿರಿರಾಜವನ್ನು ರೈತರಿಗೆ ವಿತರಿಸುತ್ತಿತ್ತು. ಆದರೆ ಇದೀಗ ರೈತರ ಬೇಡಿಕೆಯಂತೆ ಪಶುಸಂಗೋಪನಾ ಇಲಾಖೆ ಇವುಗಳ ಬದಲಿಗೆ ಆಸಿಲ್ ಕೋಳಿಗಳನ್ನು ವಿತರಿಸಲು ಮುಂದಾಗಿದೆ.
ಆಂಧ್ರಪ್ರದೇಶ ಮೂಲದ ನಾಟಿ ಆಸಿಲ್ ಕೋಳಿಗಳನ್ನು ಬಡ ಕುಟುಂಬಗಳ ಮಹಿಳೆಯರಿಗೆ ಉಚಿತವಾಗಿ ನೀಡಲು ತೀರ್ಮಾನಿಸಲಾಗಿದ್ದು, ಫಲಾನುಭವಿಗಳ ಪಟ್ಟಿಯೂ ಸಿದ್ಧವಾಗಿದೆ. ಸರ್ಕಾರದ ವಿವಿಧ ಯೋಜನೆಗಳಿಗೆ ಹಾಗೂ ರೈತರಿಗೆ ಒಂದು ದಿನದ ಕೋಳಿ ಮರಿಗಳನ್ನು ಉತ್ತಮ ಬೆಲೆಗೆ ಮಾರಾಟ ಮಾಡುತ್ತಿದ್ದ ಕಡಬ ಸಮೀಪದ ಕೊಯಿಲ ಜಾನುವಾರು ಸಂವರ್ಧನಾ ತರಬೇತಿ ಕೇಂದ್ರದ ಕುಕ್ಕುಟ ವಿಸ್ತರಣಾ ಕೋಳಿ ಮರಿ ಉತ್ಪಾದನೆ ಘಟಕದಿಂದಲೂ ಈ ಬಾರಿ ಆಸೀಲ್ ಒಂದು ದಿನದ ಮರಿಗಳ ವಿತರಣೆಗೆ ಸಿದ್ಧತೆ ನಡೆದಿದೆ.
ಮರಿ ಉತ್ಪಾದನೆಗೆ ಬೆಂಗಳೂರು ಹೇಸರಘಟ್ಟದಲ್ಲಿ ಇರುವ ಕೇಂದ್ರೀಯ ಕುಕ್ಕುಟ ಅಭಿವೃದ್ಧಿ ಸಂಸ್ಥೆಯಿಂದ ಒಂದು ದಿನ ವಯಸ್ಸಿನ 800 ಆಸಿಲ್ ಮರಿಗಳನ್ನು ತಂದು ಕೊಲ ಫಾರ್ಮ್‌ನಲ್ಲಿ ಪೇರೆಂಟ್ ಬರ್ಡ್(ಮರಿಮಾಡುವ ಸಲುವಾಗಿ ಸಾಕುವ ಕೋಳಿಗಳು) ಆಗಿ ಬೆಳೆಸಲಾಗುತ್ತಿದೆ. ಈ ಕೋಳಿ ಮರಿಗಳಿಗೆ ಈಗ 20 ವಾರ ಪೂರ್ಣಗೊಂಡಿದ್ದು, ಕೆಲವು ಮೊಟ್ಟೆ ಇಡಲು ಆರಂಭಿಸಿವೆ. ಮುಂದಿನ ತಿಂಗಳಿಂದ ರೈತರಿಗೆ ಆಸಿಲ್ ಕೋಳಿ ಮರಿಗಳ ವಿತರಣೆ ಸಾಧ್ಯವಾಗಬಹುದು ಎನ್ನುತ್ತಾರೆ ಕೊಯಿಲಕೇಂದ್ರದ ಉಪ ನಿರ್ದೇಶಕ ಡಾ.ಧರ್ಮಪಾಲ.
ಕರಾವಳಿಯಲ್ಲಿ ಡಿಮಾಂಡ್: ಗ್ರಾಮೀಣ ಪ್ರದೇಶದ ಬಡವರಿಗೆ ಲಾಭದಾಯಕವಾಗಿದ್ದ ಕುಕ್ಕುಟೋದ್ಯಮ ಕರೊನಾ ಬಳಿಕ ಕಳೆಗುಂದಿದೆ. ಇಮ್ಮಡಿಗೊಂಡ ಕೋಳಿ ಆಹಾರ ವಸ್ತುಗಳ ಬೆಲೆ ಆದಾಯದ ಶೇ.90 ಪಾಲು ನುಂಗಲು ಆರಂಭಿಸಿದೆ. ಅನೇಕ ಕುಕ್ಕುಟೋದ್ಯಮಿಗಳು ಈ ಉದ್ಯಮವನ್ನೇ ಕೈಬಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಫೈಟರ್ ಕೋಳಿಗಳನ್ನು ಸಾಕುತ್ತಿರುವವರಷ್ಟೇ ಒಳ್ಳೆಯ ಆದಾಯ ಪಡೆಯುತ್ತಿದ್ದಾರೆ. ಕರಾವಳಿಯ ಜಿಲ್ಲೆಗಳಲ್ಲಿ ಫೈಟರ್ ಕೋಳಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ಹೇಸರಘಟ್ಟದ ಕೇಂದ್ರೀಯ ಕುಕ್ಕುಟ ಅಭಿವೃದ್ಧಿ ಸಂಸ್ಥೆ ಆಸಿಲ್ ಮರಿಗಳನ್ನು ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಗುವಾಹಟಿ ಮುಂತಾದ ಕಡೆ ಕಳುಹಿಸುತ್ತದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ನೇರ ಪೂರೈಕೆ ವ್ಯವಸ್ಥೆ ಇರಲಿಲ್ಲ. ಅಗತ್ಯ ಇರುವವರು ಬೆಂಗಳೂರಿನಿಂದ ಸ್ವಂತ ವಾಹನ ವ್ಯವಸ್ಥೆಯಲ್ಲಿ ತರಿಸಿಕೊಳ್ಳಬೇಕಾಗಿತ್ತು. ಈ ಸಮಸ್ಯೆ ಈಗ ಬಗೆಹರಿದಿದೆ.
ಆಸಿಲ್ ತಳಿಯ ಕಪ್ಪು ಬಣ್ಣದ ಕಲ ಮತ್ತು ಕಂದು ಬಣ್ಣದ ಪಿಲಾ ಜಾತಿಯ ಕೋಳಿಗಳು ಕೊಲ ಫಾರ್ಮ್‌ನಲ್ಲಿವೆ. ಸೆಪ್ಟಂಬರ್ ತಿಂಗಳಿಂದ ಮಾಸಿಕ ಸುಮಾರು 6 ಸಾವಿರ ಮರಿಗಳ ಉತ್ಪಾದನೆ ಸಾಧ್ಯವಾಗಬಹುದು. ಗಿರಿರಾಜ ಕೋಳಿಗಳ ಸಂಗ್ರಹ ಮುಗಿದಿದ್ದು, ಅವುಗಳ ಮಾತೃಕೋಳಿಗಳನ್ನು ಅಭಿವೃದ್ಧಿಪಡಿಸಲು ಸೆಪ್ಟಂಬರ್‌ನಲ್ಲಿ ಮರಿಗಳು ಬರಬಹುದು.
-ಡಾ.ಧರ್ಮಪಾಲ್ ಕೆ., ಉಪ ನಿರ್ದೇಶಕರು, ಜಾನುವಾರು ಸಂವರ್ಧನಾ ತರಬೇತಿ ಕೇಂದ್ರ ಕೊಯಿಲ.