

ಗೋಕರ್ಣ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಮಾಜಿ ಸಂಸದೆ, ಕಾಂಗ್ರೆಸ್ ಹಿರಿಯ ನಾಯಕಿ ಮಾರ್ಗರೆಟ್ ಆಳ್ವಾ ಅವರಿಗೆ ಏಷಿಯಾ ಸೊಸೈಟಿ ವತಿಯಿಂದ ಸಾಮಾಜಿಕವಾಗಿ ಲೈಂಗಿಕ ಹಿಂಸೆ ಮತ್ತು ಮಕ್ಕಳ ಲೈಂಗಿಕ ಕಳ್ಳ ಸಾಗಣೆ ವಿರುದ್ಧದ ಹೋರಾಟಕ್ಕಾಗಿ ನೀಡಲಾಗುವ ಪ್ರತಿಷ್ಠಿತ ‘ಲಾಸ್ಟ್ ಗರ್ಲ್’ ಪುರಸ್ಕಾರವನ್ನು ಗುರುವಾರ ನ್ಯೂಯಾರ್ಕ್ನಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು. ಅವರ ವತಿಯಿಂದ ಪುತ್ರಿ ಮಣಿರಾ ಅವರು ನೊಬೆಲ್ ಪ್ರಶಸ್ತಿ ಪುರಸ್ಕೃತ ಲೇಮಾಹ ಗೋಬೋವಿ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.
ಸಂಸದೆ, ರಾಜ್ಯಸಭೆ ಸದಸ್ಯೆ, ಕೇಂದ್ರ ಸಚಿವೆ ಮತ್ತು ರಾಜ್ಯಪಾಲೆಯಾಗಿ ಉನ್ನತವಾದ ವಿವಿಧ ಹುದ್ದೆಗಳಲ್ಲಿ ಗಮನಾರ್ಹ ಸೇವೆಗಳನ್ನು ಆಳ್ವಾ ದಾಖಲಿಸಿದ್ದಾರೆ. ಅವರು 2005ರಲ್ಲಿ ತದಡಿ ಬಂದರು ಬಳಿ ನಿರ್ವಣವಾಗಲಿದ್ದ ಪರಿಸರಕ್ಕೆ ತೀವ್ರ ಹಾನಿಯುಂಟು ಮಾಡಲಿದ್ದ ಕಲ್ಲಿದ್ದಲು ಉಷ್ಣ ಸ್ಥಾವರವನ್ನು ತಡೆಯುವಲ್ಲಿ ಕೇಂದ್ರ ಸ್ತರದಲ್ಲಿ ಪ್ರಯತ್ನಿಸಿ ಯಶಸ್ವಿಯಾಗಿದ್ದರು. ಈ ಬಗೆಯಲ್ಲಿ ರಾಷ್ಟ್ರ ರಾಜಕೀಯದಲ್ಲಿ ತಮ್ಮದೇ ಆದ ದಾಖಲಾರ್ಹ ಸೇವೆ ಸಲ್ಲಿಸಿದ ಆಳ್ವಾ ಅವರಿಗೆ ದೊರೆತ ವಿಶ್ವ ಸ್ತರದ ಈ ಪ್ರಶಸ್ತಿಯ ಬಗ್ಗೆ ಹೆಮ್ಮೆಯಿದೆ. ಸ್ಥಳೀಯ ಉದ್ಯಮಿ, ಕಾಂಗ್ರೆಸ್ ಹಿರಿಯ ಕಾರ್ಯಕರ್ತ ನಾಗರಾಜ ಹಿತ್ತಲಮಕ್ಕಿ, ಜಿಲ್ಲಾ ಕಾಂಗ್ರೆಸ್ ಪ್ರಮುಖ ನಾಗೇಶ ನಾಯ್ಕ ಮತ್ತು ಕಾಂಗ್ರೆಸ್ ಮಾಜಿ ತಾಲೂಕಾಧ್ಯಕ್ಷ ಹೊನ್ನಪ್ಪ ನಾಯಕ ಆಳ್ವಾ ಅವರನ್ನು ಅಭಿನಂದಿಸಿದ್ದಾರೆ.