ಗಾಯಗೊಂಡಿದ್ದ ಎಎಸ್‌ಐ ನಾಭಿರಾಜ ಸಾವು

h15-nabhiraj dayannavar
Published on

ಹುಬ್ಬಳ್ಳಿ: ಇಲ್ಲಿಯ ಹಳೇ ಕೋರ್ಟ್ ಬಳಿ ತೆರಳುತ್ತಿದ್ದ ವೇಳೆ ಪ್ಲೈಓವರ್ ಕಾಮಗಾರಿಯ ಕಬ್ಬಿಣದ ರಾಡ್ ತಲೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಎಎಸ್‌ಐ ನಾಭಿರಾಜ ದಯಣ್ಣವರ (59) ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಬೆಳಗ್ಗೆ ಮೃತಪಟ್ಟಿದ್ದಾರೆ.
ಧಾರವಾಡದ ಸತ್ತೂರು ನಿವಾಸಿಯಾಗಿರುವ ದಯಣ್ಣವರ ಒಂದು ವರ್ಷದಿಂದ ಉಪನಗರ ಠಾಣೆಯಲ್ಲಿ ಎಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸೆ. 10ರಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರ ಜನಸ್ಪಂದನಾ ಸಭೆಗೆ ಕರ್ತವ್ಯ ನಿರ್ವಹಿಸಿ ಠಾಣೆಗೆ ತೆರಳುತ್ತಿದ್ದ ವೇಳೆ ನಾಭಿರಾಜ ಮೇಲೆ ಕೋರ್ಟ್ ವೃತ್ತದ ಬಳಿಯ ಪ್ಲೈಓವರ್ ಕಾಮಗಾರಿಯ ಕಬ್ಬಿಣದ ರಾಡ್ ಬಿದ್ದಿತ್ತು. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಎಎಸ್‌ಐ ಅವರನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತಿತ್ತು. ನಂತರ ಕೆಎಂಸಿಆರ್‌ಐಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು.
ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕರಾದ ಮಹೇಶ ಟೆಂಗಿನಕಾಯಿ, ಅರವಿಂದ ಬೆಲ್ಲದ, ಎಂ.ಆರ್. ಪಾಟೀಲ, ಜಿಲ್ಲಾಧಿಕಾರಿ ದಿವ್ಯಪ್ರಭು, ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಇತರರು ಆಸ್ಪತ್ರೆಗೆ ಭೇಟಿ ನೀಡಿ ಎಎಸ್‌ಐ ಆರೋಗ್ಯ ವಿಚಾರಿಸಿ ವೈದ್ಯರಿಂದ ಮಾಹಿತಿ ಪಡೆದಿದ್ದರು. ಅಲ್ಲದೇ ನಾಭಿರಾಜ ಪುತ್ರ ವೃಷಭ ಅವರು ಫ್ಲೈ ಓವರ್ ಕಾಮಗಾರಿ ಗುತ್ತಿಗೆದಾರ ಝಂಡು ಕಂಪನಿ ಎಂಡಿ ಸೇರಿ 19 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net