

ಆನೇಕಲ್: ಹೆಬ್ಬಗೋಡಿ ಪೊಲೀಸ್ ಠಾಣೆ ಎಎಸ್‌ಐ ಕೋದಂಡರಾಮರೆಡ್ಡಿ ಕರೊನಾದಿಂದ ಗುಣ ಹೊಂದಿದ ಹಿನ್ನೆಲೆಯಲ್ಲಿ ಶನಿವಾರ ಠಾಣೆ ಆವರಣದಲ್ಲಿ ಹೂವಿನ ಮಳೆ ಸುರಿಸುವ ಮೂಲಕ ಐಜಿಪಿ ಶರತ್ ಚಂದ್ರ ನೇತೃತ್ವದಲ್ಲಿ ಸ್ವಾಗತಿಸಲಾಯಿತು.
ಕೋದಂಡರಾಮರೆಡ್ಡಿ ಅವರಿಗೆ ಮೇ 27ರಂದು ಕರೊನಾ ಸೋಂಕು ಪತ್ತೆಯಾಗಿತ್ತು. ಸೂಕ್ತ ಚಿಕಿತ್ಸೆ ಪಡೆದು ಮಹಾಮಾರಿ ಕರೊನಾ ಯುದ್ಧದಲ್ಲಿ ಗೆದ್ದು ಬಂದಿದ್ದು, ಇತರರಿಗೂ ಸ್ಫೂರ್ತಿಯಾಗಿದ್ದಾರೆ ಎಂದು ಐಜಿಪಿ ಹೇಳಿದರು.
ಹೆಬ್ಬಗೋಡಿ ಪೊಲೀಸರು ಪಾದರಾಯನಪುರದ ಆರೋಪಿಗಳನ್ನು ಬಂಧಿಸಿದ ಸಂದರ್ಭದಲ್ಲಿ ಆರೋಪಿಗೆ ಕರೊನಾ ಸೋಂಕು ದೃಢವಾಗಿತ್ತು. ನಂತರ ಹೆಬ್ಬಗೋಡಿ ಠಾಣೆಯ 30 ಸಿಬ್ಬಂದಿಯನ್ನು ಹೊಂ ಕ್ವಾರಂಟೈನ್‌ನಲ್ಲಿಡಲಾಗಿತ್ತು. ಆದರೆ ಯಾರಿಗೂ ಸೋಂಕು ದೃಢಪಡಲಿಲ್ಲ ಎಂದು ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ಮಾತನಾಡಿ, ಎಎಸ್‌ಐ ಕೋದಂಡರಾಮ ರೆಡ್ಡಿ ಅವರಿಗೆ ಕರೊನಾ ದೃಢಪಟ್ಟಿತ್ತು. ಇಲಾಖೆ ಸಿಬ್ಬಂದಿ ಆರೊಗ್ಯದ ಬಗ್ಗೆ ಕಾಳಜಿ ವಹಿಸಿತ್ತು. ಈಗ ಅವರು ಆರೋಗ್ಯವಂತರಾಗಿ ಠಾಣೆಗೆ ಹಾಜರಾಗಿದ್ದು, ನಮಗೆಲ್ಲ ಸಂತಸ ತಂದಿದೆ ಎಂದರು.
ಅಡಿಷನಲ್ ಎಸ್ಪಿ ಸುಜೀತ್, ಡಿವೈಎಸ್ಪಿ ನಂಜುಂಡೇಗೌಡ, ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ಶೇಖರ್, ಉಪನಿರೀಕ್ಷಕ ಶಂಕರಪ್ಪ, ಆರಕ್ಷಕ ವೃತ್ತ ನಿರೀಕ್ಷಕರಾದ ಸತೀಶ್, ಕೆ.ವಿಶ್ವನಾಥ್, ಕೃಷ್ಣ ಲಮಾಣಿ, ನಾಗರಾಜು, ಉಪನಿರೀಕ್ಷಕರಾದ ನವೀನ್, ಮುರಳೀಧರ್, ಹರೀಶ್ ರೆಡ್ಡಿ, ಗೋವಿಂದ, ಪ್ರಸಾದ್ ಭಾಗವಹಿಸಿದ್ದರು.