

ಮೈಸೂರು: ನೂತನ ವಿನ್ಯಾಸದೊಂದಿಗೆ ಕೆಎಸ್‌ಆರ್‌ಟಿಸಿಯ ನಗರ ಹಾಗೂ ಗ್ರಾಮಾಂತರ ವಿಭಾಗಕ್ಕೆ ಬಂದಿರುವ ‘ಅಶ್ವಮೇಧ-ಕ್ಲಾಸಿಕ್’ ಬಸ್‌ಗಳನ್ನು ಸಂಚಾರಕ್ಕೆ ಮುಕ್ತಗೊಳಿಸಲಾಯಿತು.
ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ನೂತನ ಬಸ್ ಸಂಚಾರಕ್ಕ ಹಸಿರು ನಿಶಾನೆ ತೋರಿಸಿದರು.
ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್‌ಸೇಠ್, ಚಾಮರಾಜ ಕ್ಷೇತ್ರದ ಶಾಸಕ ಕೆ.ಹರೀಶ್‌ಗೌಡ, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಮೈಸೂರು ನಗರ ನಿಯಂತ್ರಣಾಧಿಕಾರಿ ವೀರೇಶ್ ತ್ಯಾಪೆ, ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಬಿ.ಶ್ರೀನಿವಾಸ್, ಕಾರ್ಮಿಕ ಇಲಾಖಾಧಿಕಾರಿ ಪುಟ್ಟೇಗೌಡ, ಕೇಂದ್ರ ಕಚೇರಿಯ ಅಧಿಕಾರಿಗಳಾದ ರಾಜು, ಲಿಂಗರಾಜು ಇತರರು ಇದ್ದರು.
20 ಹೊಸ ಬಸ್‌ಗಳನ್ನು ಸಾರ್ವಜನಿಕ ಸೇವೆಗೆ ನಿಯುಕ್ತಿಗೊಳಿಸಲಾಗಿದೆ. ಕೆಲವು ದಿನಗಳ ಹಿಂದೆ 21 ಬಸ್‌ಗಳನ್ನು ನಮ್ಮ ವಿಭಾಗಕ್ಕೆ ನೀಡಲಾಗಿತ್ತು. ಈಗ ಒಟ್ಟಾರೆ 41 ಬಸ್‌ಗಳು ನಮಗೆ ದೊರಕಿವೆ. ಇನ್ನೂ 30 ಬಸ್‌ಗಳು ಬೇಕು ಎಂದು ನಾವು ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದು ಮೈಸೂರು ಗ್ರಾಮಾಂತರ ವಿಭಾಗದ ನಿಯಂತ್ರಣಾಧಿಕಾರಿ ಶ್ರೀನಿವಾಸ್ ತಿಳಿಸಿದರು.
ಹೊಸ ಬಸ್‌ಗಳಲ್ಲಿ 3 ಬಸ್ ಬೆಂಗಳೂರಿಗೆ, 3 ಬಸ್ ನಂಜನಗೂಡು-ಮೈಸೂರು-ಬೆಂಗಳೂರಿಗೆ, 7 ಬಸ್‌ಗಳು ನಂಜನಗೂಡು-ತಿ.ನರಸೀಪುರ- ಬೆಂಗಳೂರಿಗೆ, 2 ಬಸ್‌ಗಳು ಎಚ್.ಡಿ.ಕೋಟೆಯಿಂದ ಬೆಂಗಳೂರಿಗೆ, 2 ಬಸ್‌ಗಳು ಹುಣಸೂರಿನಿಂದ ಬೆಂಗಳೂರಿಗೆ, 2 ಬಸ್‌ಗಳು ಮೈಸೂರಿನಿಂದ ಹಾಸನಕ್ಕೆ, ಒಂದು ಬಸ್ ಮೈಸೂರಿನಿಂದ ವಿರಾಜಪೇಟೆಗೆ ಸಂಚಾರ ಮಾಡಲಿವೆ. ಈ ಬಸ್‌ಗಳಲ್ಲೂ ಕೂಡ ಶಕ್ತಿ ಯೋಜನೆಯು ಅನುಷ್ಠಾನದಲ್ಲಿ ಇರುತ್ತದೆ ಎಂದು ತಿಳಿಸಿದರು.
ಅಶ್ವಮೇಧ ಬಸ್‌ಗಳು ಈಗ ಸಂಚಾರ ಮಾಡುತ್ತಿರುವ ಸಾರಿಗೆ ಬಸ್‌ಗಳಿಂತ ಒಂದು ಅಡಿ ಎತ್ತರ ಜಾಸ್ತಿ ಇವೆ. ಇದರಿಂದ ಗಾಳಿ- ಬೆಳಕು ಚೆನ್ನಾಗಿ ಬರುತ್ತದೆ. ಬಕೆಟ್ ಸೀಟುಗಳನ್ನು ಅಳವಡಿಸಿರುವುದರಿಂದ ಪ್ರಯಾಣಿಕರು ಆರಾಮವಾಗಿ ಕುಳಿತುಕೊಳ್ಳಬಹುದು ಎಂದು ವಿವರಿಸಿದರು.
9.40 ಕೋಟಿ ಮಹಿಳೆಯರ ಪ್ರಯಾಣ:
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಯಿಂದ ಮೈಸೂರು ವಿಭಾಗದ ಬಸ್‌ಗಳಲ್ಲಿ ಇದುವರೆಗೆ 9.40 ಕೋಟಿ ಮಹಿಳೆಯರು ಪ್ರಯಾಣಿಸಿದ್ದಾರೆ. ಇದರ ಟಿಕೆಟ್ ಮೌಲ್ಯ 213.84 ಕೋಟಿ ರೂ. ಅಗಲಿದೆ. ಶಕ್ತಿ ಯೋಜನೆಗಿಂತ ಮುನ್ನ ಜಿಲ್ಲೆಯಲ್ಲಿ 4.62 ಲಕ್ಷ ಪ್ರಯಾಣಿಕರು ಪ್ರತಿದಿನ ಸಂಚರಿಸುತ್ತಿದ್ದರು. ಯೋಜನೆ ಜಾರಿ ಬಳಿಕ ನಿತ್ಯ 6.07 ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಇದರಿಂದ ಸಾಕಷ್ಟು ಮಹಿಳಾ ಪ್ರಯಾಣಿಕರಿಗೆ ಅನುಕೂಲವಾಗಿದೆ ಎಂದು ಹೇಳಿದರು.