

ಕಡೂರು: ತಾಲೂಕಿನಾದ್ಯಂತ ಜನರು ವರಮಹಾಲಕ್ಷ್ಮೀ ಹಬ್ಬ ಸಡಗರದಿಂದ ಆಚರಿಸಿದರು.
ಮನೆಗಳಲ್ಲಿ ಮಹಿಳೆಯರು ಲಕ್ಷ್ಮೀ ಮುಖಪದ್ಮವನ್ನು ಅಲಂಕಾರಗೊಳಿಸಿ ಪೂಜೆ ನೆರವೇರಿಸಿದರು. ಪಟ್ಟಣದ ಹಳೇಪೇಟೆ ಮಹಾಲಕ್ಷ್ಮೀ ದೇವಾಲಯದಲ್ಲಿ ವಿಶೇಷ ಪೂಜೆ ನಡೆದವು.
ಕೆರೆಸಂತೆ ಗ್ರಾಮದ ಶ್ರೀ ಮಹಾಲಕ್ಷ್ಮೀ ದೇವಾಲಯದಲ್ಲಿ ಶುಕ್ರವಾರ ವರಮಹಾಲಕ್ಷ್ಮೀ ಪೂಜೆ ನೆರವೇರಿಸಲಾಯಿತು. ದೇವಾಲಯದ ಪ್ರಧಾನ ಅರ್ಚಕ ನವೀನ್ ಪುರೋಹಿತ್ ನೇತೃತ್ವದಲ್ಲಿ ಅಷ್ಟೋತ್ತರ, ಅಭಿಷೇಕ, ಸಂಕಲ್ಪ ಪೂಜಾ ಹಾಗೂ ಸತ್ಯನಾರಾಯಣ ಸ್ವಾಮಿ ಪೂಜೆ ಜರುಗಿದವು.
ದೇವಾಲಯ ನವೀಕರಣಗೊಳ್ಳುತ್ತಿರುವುದರಿಂದ ಆವರಣದಲ್ಲಿನ ಗುಡಿಯಲ್ಲಿ ದೇವಿಯ ಉತ್ಸವಮೂರ್ತಿ ಪ್ರತಿಷ್ಠಾಪಿಸಿ ಪೂಜಿಸಲಾಯಿತು. ಭಕ್ತರು ದೇವಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ದೇವಾಲಯದ ಧರ್ಮದರ್ಶಿ ಕರಿಬಡ್ಡೆ ಶ್ರೀನಿವಾಸ್, ಪದಾಧಿಕಾರಿಗಳಾದ ಠೇಂಕರ್‌ಸ್ವಾಮಿ, ಸುಂದರೇಶ್ ಇತರರಿದ್ದರು.
ಯಗಟಿಪುರದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದಲ್ಲಿ ವ್ಯವಸ್ಥಾಪನ ಸಮಿತಿಯಿಂದ ಮಹಿಳೆಯರಿಗೆ ಅರಿಶಿಣ-ಕುಂಕುಮ, ಬಳೆಯನ್ನು ದೇವಾಲಯದ ಆಗಮಿಕರಾದ ಪಿ.ಎನ್.ವೀರೇಶ್ ವಿತರಿಸಿದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಯಣ್ಣ ಇದ್ದರು.