

ಮಡಿಕೇರಿ:
ಪ್ರತಿಯೊಬ್ಬರೂ ಭಗವದ್ಗೀತೆಯನ್ನು ಅಧ್ಯಯನ ಮಾಡಿದ್ದಲ್ಲಿ ಶ್ರೀಕೃಷ್ಣನ ಮಹತ್ವ ಬಗ್ಗೆ ಅರಿವಾಗುತ್ತದೆ. ಆ ದಿಸೆಯಲ್ಲಿ ಶ್ರೀಕೃಷ್ಣನ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಚಿಂತಕ ಚಿ.ನಾ. ಸೋಮೇಶ್ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಗಾಂಧಿ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಶ್ರೀಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮದಲ್ಲಿ ಶ್ರೀಕೃಷ್ಣ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.
ಶ್ರೀಕೃಷ್ಣ ಒಂದು ರೀತಿ ವಿಶಿಷ್ಟ ಚೇತನರಾಗಿದ್ದು, ವಿಶ್ವದ ಬೆಳಕು ಎಂದರೆ ಅತಿಶಯೋಕ್ತಿಯಲ್ಲ. ಶ್ರೀಕೃಷ್ಣನ ಬಗ್ಗೆ ಪ್ರತಿಯೊಬ್ಬರಲ್ಲಿಯೂ ಹೆಚ್ಚಿನ ಗೌರವ ಮತ್ತು ಭಕ್ತಿ ಇದೆ. ಶ್ರೀಕೃಷ್ಷನ ವೇಷದಲ್ಲಿ ಮಕ್ಕಳನ್ನು ಕಾಣುತ್ತೇವೆ. ಜತೆಗೆ ಶ್ರೀಕೃಷ್ಣನನ್ನು ಮಹಾಭಾರತದಲ್ಲಿ ಸಾರಥಿಯಾಗಿ ನೋಡುತ್ತೇವೆ. ಮಹಾಭಾರತದಲ್ಲಿ ಶ್ರೀಕೃಷ್ಣನ ಬಗ್ಗೆ ಒಳ್ಳೆಯ ಸಂದೇಶ ತಿಳಿಯುತ್ತೇವೆ. ಯಾವುದೇ ಫಲಾಪೇಕ್ಷೆ ಇಲ್ಲದೆ ನೀಡಿದ ಕೆಲಸವನ್ನು ಶ್ರದ್ಧೆಯಿಂದ ನಿರ್ವಹಿಸಿ ಬದುಕನ್ನು ಉತ್ತಮ ಪಡಿಸಿಕೊಳ್ಳಬೇಕು ಎಂಬ ಸಂದೇಶವನ್ನು ಶ್ರೀಕೃಷ್ಣ ಸಾರಿದ್ದಾರೆ.
ಜೀವನವು ನಿಂತ ನೀರಾಗದೆ ಹರಿವ ನೀರಿನಂತೆ ಬದುಕನ್ನು ಮುನ್ನಡೆಸಬೇಕು. ಉತ್ತಮ ಬದುಕು ರೂಪಿಸಿಕೊಳ್ಳಲು ಮುಂದಾಗಬೇಕು. ಆ ನಿಟ್ಟಿನಲ್ಲಿ ಮಹಾಭಾರತದಲ್ಲಿ ಶ್ರೀಕೃಷ್ಣನ ಸಂದೇಶಗಳು ಒಳ್ಳೆಯ ಚಿಂತನೆ ಒಳಗೊಂಡಿದೆ. ಭರತ ಖಂಡದಲ್ಲಿ ಇಡೀ ವೇದಾಂತವನ್ನು ಸುಲಲಿತವಾಗಿ ತಲುಪಿಸಿದವರು ಶ್ರೀಕೃಷ್ಣ ಎಂದರೆ ತಪ್ಪಾಗಲಾರದು. ತತ್ವಶಾಸ್ತç ಸೇರಿದಂತೆ ಹಲವು ಜ್ಞಾನವನ್ನು ಹೊಂದಿದ್ದ ಶ್ರೀಕೃಷ್ಣ ಇಡೀ ಭರತ ಖಂಡದಲ್ಲಿ ತಮ್ಮದೇ ಆದ ಇತಿಹಾಸ ಹೊಂದಿದ್ದಾರೆ. ಗೋಕುಲದಲ್ಲಿ ಆಟವಾಡಿಕೊಂಡು ಬೆಳೆದ ಶ್ರೀಕೃಷ್ಣನ ಸಂದೇಶಗಳನ್ನು ತಿಳಿದುಕೊಳ್ಳಬೇಕು. ಶ್ರೀಕೃಷ್ಣನಿಂದ ತಾಳ್ಮೆ ಕಲಿಯುವಂತಾಗಬೇಕು ಎಂದರು.
ತಹಸೀಲ್ದಾರ್ ಶ್ರೀಧರ ಮಾತನಾಡಿ ಶ್ರೀಕೃಷ್ಣನ ಆದರ್ಶ ಗುಣಗಳು ಸಾರ್ವಕಾಲೀಕವಾಗಿದ್ದು, ಶ್ರೀಕೃಷ್ಣನ ಮನಸ್ಸು ಮತ್ತು ಚಿಂತನೆಗಳು ಪ್ರೇರಣೆಯಾಗಿದೆ. ಮನಸ್ಸು ನೆಮ್ಮದಿಯಾಗಿದ್ದಾಗ ನಕಾರಾತ್ಮಕ ಯೋಚನೆಗೆ ಜಾಗ ಇರುವುದಿಲ್ಲ, ಆ ನಿಟ್ಟಿನಲ್ಲಿ ಶ್ರೀಕೃಷ್ಣರ ಬದುಕು ಒಂದು ರೀತಿ ಮಾದರಿ ಎಂದು ಹೇಳಿದರು.
ಕಂಚಿಕಾಮಾಕ್ಷಿ ದೇವಾಲಯ ಸಮಿತಿಯ ಗೌರವ ಅಧ್ಯಕ್ಷ ಜಿ.ವಿ. ರವಿಕುಮಾರ್ ಮಾತನಾಡಿ ಶ್ರೀಕೃಷ್ಣನ ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿವೆ. ಶ್ರೀಕೃಷ್ಣ ಭಕ್ತಿಯ ಶಕ್ತಿಯಾಗಿ ಬರುತ್ತಾರೆ. ಜೀವನದಲ್ಲಿ ಮಾನವೀಯ ಮೌಲ್ಯ ಮತ್ತು ಆಧ್ಯಾತ್ಮಿಕತೆಯನ್ನು ಅಳವಡಿಸಿಕೊಳ್ಳಬೇಕು. ಸಮಾಜದಲ್ಲಿ ದ್ವೇಷ, ಅಸೂಯೆ, ಅಸಹನೆ, ಅಸಹಿಷ್ಣುತೆ ಇರಬಾರದು. ಒಳ್ಳೆಯದನ್ನು ರೂಡಿಸಿಕೊಳ್ಳಬೇಕು ಎಂದರು.
ಪ್ರಿಯಾ ರವಿಕುಮಾರ್, ಕಂಚಿ ಕಾಮಾಕ್ಷಮ್ಮ ದೇವಾಲಯ ಸಮಿತಿ ಉಪಾಧ್ಯಕ್ಷ ಜಗದೀಶ್, ಬ್ಲಾಸಂ ಶಾಲೆಯ ಮುಖ್ಯೋಪಾಧ್ಯಾಯಿನಿ ಅನಸೂಯ ಮಾತನಾಡಿದರು.
ಕಂಚಿ ಕಾಮಾಕ್ಷಮ್ಮ ದೇವಾಲಯ ಸಮಿತಿ ಅಧ್ಯಕ್ಷ ಜಿ.ಎಲ್. ದಾಸ್, ಉಪಾಧ್ಯಕ್ಷ ಪೆರುಮಾಳ್, ಗೌರವಾಧ್ಯಕ್ಷ ಜಿ.ಜಿ. ಬಾಲಕೃಷ್ಣ, ಜಿ.ಬಿ. ಪವನ್, ಜಾನಪದ ಪರಿಷತ್ತು ತಾಲ್ಲೂಕು ಘಟಕದ ಅಧ್ಯಕ್ಷ ಹೆಚ್.ಟಿ. ಅನಿಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ, . ಮಣಜೂರು ಮಂಜುನಾಥ್ ಇದ್ದರು.