

ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಸಾಮಾಜಿಕ ಸಾಮರಸ್ಯಕ್ಕೆ ಮಧೂರು ಕ್ಷೇತ್ರ ಮಹತ್ವದ ಕೊಡುಗೆ ನೀಡುತ್ತಿರುವುದಗಿ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು.
ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆ ಅಂಗವಾಗಿ ನಡೆಯಲಿರುವ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಿಸಿ ಆಶೀರ್ವಚನ ನೀಡಿದರು.
ಆರಾಧನಾಲಯಗಳು ಜನರ ಭಕ್ತಿ-ಶ್ರದ್ಧೆಯ ಕೇಂದ್ರಗಳಾಗಿದ್ದು, ಕ್ಷೇತ್ರದ ಪಾವಿತ್ರ್ಯ ಕಾಪಾಡುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರದಾಗಿದೆ. ಜನರ ಸ್ವಪ್ರತಿಷ್ಠೆಯಿಂದ ಸಮಾಜದಲ್ಲಿ ಅನಾಹುತಗಳಿಗೆ ಕಾರಣವಾಗುತ್ತಿದೆ. ನಮ್ಮ ಅಂತರಂಗದಲ್ಲಿ ದೇವ ಪ್ರತಿಷ್ಠೆಯಾಗಬೇಕೆ ಹೊರತು ಸ್ವಪ್ರತಿಷ್ಠೆಯಲ್ಲ ಎಂದು ತಿಳಿಸಿದರು.
ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಿ, ಹಲವು ವರ್ಷಗಳ ನಂತರ ಮಧೂರು ಮಹಾಗಣಪತಿ ಸನ್ನಿಧಿ ಇಂದು ಬ್ರಹ್ಮಕಲಶೋತ್ಸವದ ಸಂಭ್ರಮದೊಂದಿಗೆ ಲೋಕಹಿತದ ಅನುಗ್ರಹ ಶಕ್ತಿ ಪ್ರಾಪ್ತವಾಗಿರುವುದು ನಮ್ಮೆಲ್ಲರ ಪುಣ್ಯ ಎಂದು ತಿಳಿಸಿದರು. ಉಪ್ಪಳ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ.ಬಿ.ಎಸ್.ರಾವ್ ಅಧ್ಯಕ್ಷತೆ ವಹಿಸಿದ್ದರು.
ಮುಂಡಪ್ಪಳ್ಳ ಶ್ರೀರಾಜರಾಜೇಶ್ವರೀ ಕ್ಷೇತ್ರದ ಆಡಳಿತ ಮೊಕ್ತೇಸರ ಕೆ.ಕೆ ಶೆಟ್ಟಿ, ಮಧೂರು ಕ್ಷೇತ್ರ ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಮಹಾಬಲೇಶ್ವರ ಭಟ್ ಎಡಕ್ಕಾನ ಗೌರವ ಉಪಸ್ಥಿತರಿದ್ದರು. ಬೆಂಗಳೂರು ಹೈಕೋರ್ಟ್ ವಕೀಲ ಬಾರಿ ಭಂಡಾರಿ, ವಾಸ್ತು ವಿದ್ಯಾಕುಲಪತಿ ಕಾಣಿಪಯ್ಯೂರು ಕೃಷ್ಣನ್ ನಂಬೂದಿರಿ, ವಾಸ್ತು ಶಿಲ್ಪಿ ಕೃಷ್ಣಪ್ರಸಾದ್ ಮುನಿಯಂಗಳ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಮಂಜುನಾಥ ಕಾಮತ್, ಉಪಾಧ್ಯಕ್ಷ ಎಂ.ಶಂಕರನಾರಾಯಣ ಭಟ್ ಅಳಕೆ, ಉದ್ಯಮಿ ಈಶ್ವರ ಭಟ್ ವಿಟ್ಲ, ಎ.ಡಿ ಶೆಟ್ಟಿ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ ಸ್ವಾಗತಿಸಿದರು. ಅಪ್ಪಯ್ಯ ನಾಯ್ಕ ಮಧೂರು ಹಾಗೂ ಜಗದೀಶ ಕೂಡ್ಲು ನಿರೂಪಿಸಿದರು. ಉಪಾಧ್ಯಕ್ಷ ದಾಮೋದರ ಡಿ.ವಂದಿಸಿದರು.