

ಬೆಂಗಳೂರು: ಬಡವರ ಸಮಸ್ಯೆಗೆ ಸ್ಪಂದಿಸುವಂತಹ ಆಶ್ರಮಗಳಿಗೆ ಸಮುದಾಯದ ಪ್ರೋತ್ಸಾಹ ಅಗತ್ಯವಿದೆ ಎಂದು ಸಚಿವ ಬೈರತಿ ಸುರೇಶ್ ಹೇಳಿದ್ದಾರೆ.
ಹೆಬ್ಬಾಳದಲ್ಲಿರುವ ಸುಮಂಗಲಿ ಸೇವಾ ಆಶ್ರಮದಲ್ಲಿ ಶುಕ್ರವಾರ ಏರ್ಪಡಿಸಿದ್ದ ಆಶ್ರಮದ ಸಲಹೆಗಾರ ಎನ್. ಶ್ರೀದೇವಿ ರಚಿಸಿರುವ "ವಿಸ್ಪರ್ಸ್ ಆಫ್ ವಿಸ್ಡಮ್' ಮತ್ತು "ಟಾಯ್ಸ್ - ಗೇಮ್ಸ್' ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು. ಅಬಲೆಯರ ಶ್ರೇಯೋಭಿವೃದ್ಧಿಗಾಗಿ ದುಡಿಯುತ್ತಿರುವ ಸುಮಂಗಲಿ ಸೇವಾ ಶ್ರಮ ನಾಡಿನ ಹೆಮ್ಮೆಯ ಸಂಸ್ಥೆ ಎಂದು ಬಣ್ಣಿಸಿದರು.
ಸೇವಾಶ್ರಮ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಇಲ್ಲಿ ಆಶ್ರಯ ಪಡೆಯುತ್ತಿರುವವರ ಸಂಖ್ಯೆಯೂ ಜಾಸ್ತಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆಶ್ರಮಕ್ಕೆ ಅಗತ್ಯವಿರುವ ಸಹಕಾರವನ್ನು ನೀಡಲು ಸರ್ಕಾರ ಮತ್ತು ಶಾಸಕನಾಗಿ ನಾನು ಬದ್ಧವಾಗಿದ್ದೇನೆ ಎಂದು ಭರವಸೆ ನೀಡಿದರು.
ಆರ್ಥಿಕವಾಗಿ ಹಿಂದುಳಿದವರು, ಅನಾಥ ಹೆಣ್ಣು ಮಕ್ಕಳನ್ನು ಪೋಷಣೆ ಮಾಡುವ ಮೂಲಕ ಅವರಿಗೆ ಪುನರ್ಜನ್ಮ ನೀಡುವ ಮಹತ್ಕಾರ್ಯ ಪದ್ಮಶ್ರೀ ಪುರಸತೆ ಡಾ.ಎಸ್.ಜಿ. ಸುಶೀಲಮ್ಮ ನೇತೃತ್ವದ ಆಶ್ರಮ ಮಾಡುತ್ತಿದೆ ಎಂದು ಶ್ಲಾಘಿಸಿದರು.
ಸುಶೀಲಮ್ಮ ತಂಡ ನಡೆಸುತ್ತಿರುವ ಕಾರ್ಯದಿಂದಾಗಿ ಸಾವಿರಾರು ಹೆಣ್ಣು ಮಕ್ಕಳು ಸಮಾಜದಲ್ಲಿ ಸ್ವಾವಲಂಬಿ ಜೀವನ ಸಾಗಿಸುವಂತಾಗಿದೆ. ಈ ಕಾರಣದಿಂದಲೇ ಸುಶೀಲಮ್ಮ ಅವರು ಕೇವಲ ಆಶ್ರಮ ವಾಸಿಗಳಿಗೆ ತಾಯಿಯಲ್ಲ, ಇಡೀ ಹೆಬ್ಬಾಳ ಕ್ಷೇತ್ರದ ಮಹಾತಾಯಿಯಾಗಿದ್ದಾರೆ ಎಂದರು.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಶಿವರಾತ್ರೀ ದೇಶೀಕೇಂದ್ರ ಸ್ವಾಮೀಜಿ, ಮಾಜಿ ಸಚಿವೆ ರಾಣಿ ಸತೀಶ್, ಡಾ.ಸಿ.ಸೋಮಶೇಖರ್, ಲೇಖಕಿ ಡಾ.ಸುಶೀಲಮ್ಮ, ಎನ್. ಶ್ರೀದೇವಿ ಉಪಸ್ಥಿತರಿದ್ದರು.