ಅಶೋಕ ಪಥ ಪುಸ್ತಕ ಲೋಕಾರ್ಪಣೆ 11ರಂದು

ashok s
Published on

ಹುಬ್ಬಳ್ಳಿ: ಶಿಕ್ಷಕ ವೃತ್ತಿಯಿಂದ ನಿವೃತ್ತರಾದ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ ಸಜ್ಜನ ಅವರ ಅಭಿನಂದನ ಸಮಾರಂಭ ಹಾಗೂ ಅಶೋಕಪಥ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಫೆ. 11ರಂದು ಮಧ್ಯಾಹ್ನ 2.30ಕ್ಕೆ ದೇಶಪಾಂಡೆನಗರ ಸವಾಯಿ ಗಂಧರ್ವ ಕಲಾಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಅಭಿನಂದನ ಸಮಿತಿಯ ಅಧ್ಯಕ್ಷ ಡಿ.ಎಸ್. ಭಜಂತ್ರಿ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕಮಗಳೂರಿನ ಮಾಚಗೊಂಡನಹಳ್ಳಿಯ ಬೇರುಗಂಡಿ ಬ್ರಹನ್ಮಠದ ಶ್ರೀ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮಿ ಸಾನಿಧ್ಯ ವಹಿಸುವರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸುವರು. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಧ್ಯಕ್ಷತೆ ವಹಿಸುವರು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅಶೋಕಪಥ ಪುಸ್ತಕ ಲೋಕಾರ್ಪಣೆ ಮಾಡುವರು. ಸಂಘದ ಧಾರವಾಡ ಜಿಲ್ಲಾ ಅಧ್ಯಕ್ಷ ಅಕ್ಬರಲಿ ಸೋಲಾಪುರ ಇವರ ಯುಗಾದಿ ಕವನ ಸಂಕಲನವನ್ನು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಬಿಡುಗಡೆ ಮಾಡುವರು ಎಂದರು.

ಸಂಘದ ಮಹಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಉಪ್ಪಿನ ಮಾತನಾಡಿ, ಸಜ್ಜನ ಹಾಗೂ ಹೊಸಗಾಣಿಗೇರ ಪರಿವಾರದ ಸಹಕಾರದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಶಾಸಕರಾದ ಎನ್.ಎಚ್. ಕೋನರಡ್ಡಿ, ಮಹೇಶ ಟೆಂಗಿನಕಾಯಿ, ವಿಧಾನ ಪರಿಷತ್ ಸದಸ್ಯ ಎಸ್. ವಿ. ಸಂಕನೂರ, ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಇತರರು ಪಾಲ್ಗೊಳ್ಳುವರು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಎಲ್. ಐ. ಲಕ್ಕಮ್ಮನವರ, ಶರಣಪ್ಪಗೌಡ ಆರ್.ಕೆ., ಗೋವಿಂದ ಜುಜಾರೆ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net