ಅಶೋಕೆಯಲ್ಲಿ ಮಾತೃಭಾಷಾ ಇತಿಹಾಸದ ವಿನೂತನ ಶಕಾರಂಭ

gkn SATRA
Published on

ಗೋಕರ್ಣ: ಸ್ವಭಾಷೆ ಸಂರಕ್ಷಿಸುವುದು ಸ್ವಧರ್ಮ ರಕ್ಷಣೆಯ ಪ್ರಧಾನ ಅಂಗವಾಗಿದೆ. ಈ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ಸ್ವಭಾಷೆಯನ್ನು ಆಧರಿಸಿದ ಚಾತುರ್ವಸ್ಯ ಆಚರಿತವಾಗಿ ಮಾತೃಭಾಷಾ ಇತಿಹಾಸದ ವಿನೂತನ ಶಕಾರಂಭವೊಂದಕ್ಕೆ ಶ್ರೀಕಾರ ಬರೆಯಲಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಪೀಠಾಧಿಪತಿಗಳಾದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಆಶೀರ್ವದಿಸಿದರು.

ಅಶೋಕೆಯ ಶ್ರೀಮಠದಲ್ಲಿ ಗುರುವಾರ ಆಯೋಜಿತವಾದ ಕಾರ್ಯಕರ್ತರ ವಿಶೇಷ ಸಭೆಯಲ್ಲಿ ಶ್ರೀಗಳು 32ನೇ ಚಾತುರ್ವಸ್ಯದ ವಿವರವನ್ನು ಅನುಗ್ರಹಿಸಿದರು.

ಇಂದು ನಮ್ಮ ಕನ್ನಡ ಮಾತೃಭಾಷೆ ಪರಭಾಷಾ ಶಬ್ದಗಳ ಬಳಕೆಯ ಮೌಢ್ಯದಿಂದ ಆದಿಮೂಲದ ತನ್ನ ಅಂತಃಸತ್ವಗಳಿಂದ ವಿಮುಖವಾಗಿದೆ. ನಮ್ಮ ಅಜ್ಞಾನ ಮತ್ತು ಅವಜ್ಞೆಯಿಂದ ಕನ್ನಡ ಭಾಷೆಯಲ್ಲಿ ವೈಭವೀಕರಿಸಲಾಗುತ್ತಿರುವ ಅನ್ಯ ಭಾಷೆ ಇಂಗ್ಲಿಷ್ ಶಬ್ದಗಳಿಂದ ಕನ್ನಡದ ಕಸ್ತೂರಿ ಪರಿಮಳದ ಕಂಪು ಕಳೆದುಕೊಳ್ಳುವ ಅತ್ಯಪಾಯದಲ್ಲಿದೆ. ಮುಂದೊಂದು ದಿನ ಇಂಗ್ಲಿಷ್​ನಂತಹ ಪರಭಾಷಾ, ಪರದೇಶೀಯ ಶಬ್ದಗಳೇ ಮಾತೃಭಾಷೆಯನ್ನು ವ್ಯಾಪಿಸಿಕೊಳ್ಳುವ ಆತಂಕ ಎದುರಾಗಿದೆ. ಇಂಗ್ಲಿಷ್ ಮಾತನಾಡುವುದು ದೊಡ್ಡಸ್ತಿಕೆ ಎಂಬ ಜಾಡ್ಯ ಮತ್ತು ಕೀಳರಿಮೆ ತೊಡೆದು ಹಾಕಿ ಶುದ್ಧ ಕನ್ನಡ ಮಾತೃಭಾಷೆಯನ್ನು ಪೃಥಃಕ್ಕರಿಸುವ ಮೊದಲ ಪ್ರಯತ್ನವಾಗಿ ಈ ಸಂವತ್ಸರದ 32ನೇ ಚಾತುರ್ವಸ್ಯ ಆಚರಿತವಾಗುತ್ತಿದೆ ಎಂದು ತಿಳಿಸಿದರು.

ಸ್ವಭಾಷೆಯಲ್ಲಿ ನಿತ್ಯ ಬಳಸಲ್ಪಡುವ ಆಂಗ್ಲೀಯ ಶಬ್ದಗಳಿಗೆ ಯುಕ್ತ ಮತ್ತು ಸಶಕ್ತ ಪರ್ಯಾಯ ಕನ್ನಡ ಪದ ಸಂಯೋಜನೆಗಾಗಿ ವಿದ್ವಾಂಸ ಪ್ರಮುಖರು ಈಗಾಗಲೇ ಕಾರ್ಯೋನ್ಮುಖರಾಗಿದ್ದಾರೆ. ಚಾತುರ್ವಸ್ಯದಲ್ಲಿ ಕನ್ನಡ ಕುರಿತ ವಿವಿಧ ಗೋಷ್ಠಿಗಳು, ಕನ್ನಡ ಸಾಹಿತ್ಯ ಪರಂಪರೆಯ ವಿವಿಧ ಪುಸ್ತಕಗಳು ನಾಡಿಗೆ ಅರ್ಪಿತವಾಗಲಿವೆ. ಚಾತುರ್ವಸ್ಯ ಆಯೋಜಿತವಾಗುವ ಪ್ರಮುಖ ಸ್ಥಳಗಳು ಮತ್ತು ಅಶೋಕೆಯ ಶ್ರೀಮಠದ ಪರಿಸರದಲ್ಲಿ ಎಲ್ಲೆಡೆ ಮಾತೃಭಾಷೆ ಕನ್ನಡದ ಫಲಕಗಳು ಭಾಷಾ ಬಲವತ್ತತೆಯನ್ನು ಸಂವರ್ಧಿಸುವ ಮಹತ್ಕಾರ್ಯದಲ್ಲಿ ಪ್ರತಿಷ್ಠಾಪಿತವಾಗಲಿದೆ. ಇವುಗಳ ಜೊತೆಗೆ ಮಾತೃಭಾಷೆಗೆ ಅನುಪಮ ಸೇವೆ ಸಲ್ಲಿಸಿದ ನಮ್ಮ ಹಿರಿಯ ಕನ್ನಡ ವಿದ್ವಾಂಸರ ಸಂಸ್ಮರಣೆ ಮತ್ತು ಗೌರವಾರ್ಪಣೆ ನಡೆಯಲಿದೆ. ಹೀಗೆ ಈ ಎಲ್ಲ ಕಾರ್ಯ ವಿಧಾನಗಳಿಂದ ನಾವೇ ಆವಾಹನೆಗೊಳಿಸಿಕೊಂಡಿರುವ ಇಂಗ್ಲಿಷ್ ಆಕ್ರಮಣವನ್ನು ಹಿಮ್ಮೆಟ್ಟಿಸಿ ನಮ್ಮತನದ ನಮ್ಮಭಾಷೆಯನ್ನು ಸಂರಕ್ಷಿಸಿಕೊಳ್ಳುವ ಪ್ರಯತ್ನಕ್ಕೆ ಸಮಸ್ತ ಸಮಾಜ ಮತ್ತು ಸಮಗ್ರ ನಾಡಿಗೆ ವಿಶ್ವಾವಸು ಸಂವತ್ಸರದ ಈ 32ನೇ ಚಾತುರ್ವಸ್ಯ ಸಾರ್ವಕಾಲಿಕ ಆದರ್ಶವಾಗಿ ಉಳಿಯಲಿದೆ ಎಂದು ಶ್ರೀಗಳು ಆಶೀರ್ವಾದ ಅನುಗ್ರಹಿಸಿದರು.

ಚಾತುರ್ವಸ್ಯದ ಸೇವಾಬಿಂದುಗಳಾದ ಮಂಜುನಾಥ ಭಟ್ಟ ಸುವರ್ಣಗದ್ದೆ, ಪ್ರಸನ್ನಕುಮಾರ ಟಿ.ಜಿ., ಜಿ.ಕೆ. ಹೆಗಡೆ, ಶ್ರೀಕಾಂತ ಪಂಡಿತ, ಉದಯಶಂಕರ ಭಟ್ಟ ಮಿತ್ತೂರು, ಮಧು ಜಿ.ಕೆ., ಜಿ.ಎಸ್. ಹೆಗಡೆ, ಸುಬ್ರಾಯ ಭಟ್ಟ ಮೂರೂರು, ರಾಜು ಹೆಬ್ಬಾರ, ಮಹೇಶ ಹೆಗಡೆ, ಜಿ.ವಿ. ಹೆಗಡೆ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net