ಅಶೋಕಪುರ ಗಣಪತಿ ವಿಸರ್ಜನೆ

8adarshkdga2
Published on

ಮಡಿಕೇರಿ: ಶೋಭಾಯಾತ್ರೆಯ ಮೆರಗಿನೊಂದಿಗೆ ನಗರದ ಅಶೋಕಪಪುರದಲ್ಲಿ ಗಣಪತಿ ಉತ್ಸವ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯನ್ನು ಶ್ರದ್ಧಾಭಕ್ತಿಯಿಂದ ಶನಿವಾರ ರಾತ್ರಿ ವಿಸರ್ಜಿಸಲಾಯಿತು.


ಅಶೋಕಪುರದಲ್ಲಿ ಪ್ರತಿಷ್ಠಾಪಿಸಿದ್ದ ಮೂರ್ತಿಯನ್ನು ಮಂಟಪದಲ್ಲಿಟ್ಟು ವಿಶೇಷ ಪೂಜೆ ಸಲ್ಲಿಸಿ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು. ರೂ.೮ ಲಕ್ಷ ವೆಚ್ಚದಲ್ಲಿ ಈ ಬಾರಿ ಗಣಪತಿಯಿಂದ ನರಹಂತಕ ದೇವಾಂತಕ ರಾಕ್ಷಸನ ಸಂಹಾರ ಎಂಬ ಪೌರಾಣಿಕ ಹಿನ್ನೆಲೆಯಲ್ಲಿ ಸಮಿತಿ ಮಂಟಪ ರಚಿಸಿತ್ತು. ದಿಂಡಿಗಲ್ಲಿನ ಪ್ರಭಾವಳಿ, ಗಣೇಶ ಸೇರಿದಂತೆ ದೇವಾನುದೇವತೆ, ಅಸುರರ ಕಲಾಕೃತಿಗಳು ಮಂಟಪದ ಅಂದವನ್ನು ಹೆಚ್ಚಿಸಿದವು. ರಂಗುರಂಗಿನ ಕಾಗಾದದ ಸ್ಫೋಟಕಗಳು, ಚಿಮ್ಮುವ ಬೆಂಕಿ, ಪಟಾಕಿಗಳು ರೋಮಾಂಚನ ಅನುಭವ ನೀಡಿದವು. ದೇವರು-ಅಸುರನ ನಡುವಿನ ಯುದ್ಧವನ್ನು ಮನಮೋಹಕವಾಗಿ ಪ್ರಸ್ತುತಪಡಿಸಲಾಯಿತು.


ಅಶೋಕಪುರದಿಂದ ಹೊರಟ ಮಂಟಪ ಫೀ.ಮಾ. ಕಾರ್ಯಪ್ಪ, ಜನರಲ್ ತಿಮ್ಮಯ್ಯ ವೃತ್ತ, ಮಂಗೇರಿರ ಮುತ್ತಣ್ಣ ವೃತ್ತ, ಇಂದಿರಾ ಗಾಂಧಿ ವೃತ್ತದಲ್ಲಿ ಪ್ರದರ್ಶನವನ್ನು ಜನರು ಕಣ್ತುಂಬಿಕೊಂಡರು. ನಗರದಲ್ಲಿ ಜನಪ್ರಿಯತೆ ಗಳಿಸಿರುವ ಈ ಸಮಿತಿಯ ವಿಸರ್ಜನೋತ್ಸವಕ್ಕೆ ಅಧಿಕ ಸಂಖ್ಯೆಯಲ್ಲಿ ಜನರು ಆಗಮಿಸಿ ಸಂಭ್ರಮಿಸಿದರು. ಡಿಜೆಗೆ ಕುಣಿದು ಕುಪ್ಪಳಿಸಿದರು.


ಓಂಕಾರೇಶ್ವರ ದೇವಾಲಯ ಸಮೀಪದ ಗೌರಿಕೆರೆಯಲ್ಲಿ ಮೂರ್ತಿಯನ್ನು ವಿಸರ್ಜಿಸಿ ಮಡಿಕೇರಿಯಲ್ಲಿ ವಿಸರ್ಜನೋತ್ಸವಕ್ಕೆ ತೆರೆ ಎಳೆಯಲಾಯಿತು. ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net