ಮಳೆಯಿಂದಾಗಿ ಅಶೋಕನಗರದಲ್ಲಿ ಅವಾಂತರ: ಜವಾಬ್ದಾರಿ ನಿರ್ವಹಿಸದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಕೌನ್ಸಿಲರ್ ವಿರುದ್ಧ ಆಕ್ರೋಶ

Ashokanagar Residents Protest mandya
Published on

ಮಂಡ್ಯ: ಬಿರುಗಾಳಿ ಸಹಿತ ಜೋರು ಮಳೆಯಿಂದಾಗಿ ಯುವಕ ಮೃತಪಟ್ಟಿದ್ದು ಸೇರಿದಂತೆ ಸೃಷ್ಟಿಯಾಗಿರುವ ಅವಾಂತರಕ್ಕೆ ಅಧಿಕಾರಿಗಳೇ ಕಾರಣ ಎಂದು ಆರೋಪಿಸಿ ಅಶೋಕನಗರದಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.

ಜಿಲ್ಲಾಸ್ಪತ್ರೆ ರಸ್ತೆಯಲ್ಲಿ ಜಮಾಯಿಸಿದ ಸಾರ್ವಜನಿಕರು, ರಸ್ತೆ ಸಂಚಾರ ತಡೆದು ೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಭಾರೀ ಮಳೆಗೆ ಮರ, ವಿದ್ಯುತ್ ಕಂಬ ನೆಲಕ್ಕುರುಳಿವೆ. ನೂರಾರು ವಾಹನಗಳು ಜಖಂಗೊಂಡಿವೆ. ಇದಕ್ಕೆ ಅರಣ್ಯ ಇಲಾಖೆ, ನಗರಸಭೆ ಅಧಿಕಾರಿಗಳು ಮತ್ತು ಜಿಲ್ಲಾಡಳಿತವೇ ನೇರ ಹೊಣೆಯಾಗಿದೆ ಎಂದು ಆರೋಪಿಸಿದರು.

ಅಶೋಕನಗರ ಬಡಾವಣೆಯಲ್ಲೇ ಅತಿ ಹೆಚ್ಚು ಮರಗಳು ಬಿದ್ದಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಒಣಗಿರುವ ಹಾಗೂ ಶಿಥಿಲಗೊಂಡಿದ್ದ ಮರಗಳ ರೆಂಬೆ-ಕೊಂಬೆಗಳನ್ನು ಕತ್ತರಿಸುವುದನ್ನು ಬಿಟ್ಟು ನಿರ್ಲಕ್ಷ್ಯ ವಹಿಸಿದ್ದರು. ಹಲವಾರು ಬಾರಿ ಸಾರ್ವಜನಿಕರು ಮನವಿ ಮಾಡಿದರೂ, ಯಾವುದೇ ಪ್ರಯೋಜನವಾಗಿರಲಿಲ್ಲ. ಇತ್ತ ವಾರ್ಡ್‌ನಲ್ಲಿ ಇಷ್ಟೆಲ್ಲ ಅವಾಂತರವಾಗಿದ್ದರೂ ನಗರಸಭೆ ಸದಸ್ಯೆ ನಾಪತ್ತೆಯಾಗಿದ್ದಾರೆ. ಒಬ್ಬ ಯುವಕ ಸಾವನ್ನಪ್ಪಿದ್ದಾನೆ. ವಿವೇಕಾನಂದ ರಸ್ತೆಯಲ್ಲಿರುವ ಮನೆಯೊಂದರ ಗೇಟ್‌ನ ಮೇಲೆ ವಿದ್ಯುತ್ ಕಂಬ ಮುರಿದು ಬಿದ್ದು, ಭಾರೀ ಅವಘಡವೊಂದು ತಪ್ಪಿದೆ. ಆ ಮನೆಯವರು ಹೊರಗೆ ಬರಲಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಸಾಲು ಸಾಲು ಮರಗಳು ನೆಲಕ್ಕುರುಳಿವೆ. ಆದರೆ ಈ ವಾರ್ಡಿನ ಸದಸ್ಯೆ ಮಾತ್ರ ಇದಕ್ಕೂ ನನಗೂ ಸಂಬಂಧವೇ ಇಲ್ಲ ಎಂದು ನಡೆದುಕೊಂಡಿದ್ದಾರೆ ಎಂದು ಕಿಡಿಕಾರಿದರು,

ನಗರಸಭೆ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಾಂತ್ವನ ಹೇಳುವ ಕೆಲಸ ಮಾಡಲಿಲ್ಲ. ಮನೆಗೆ ಇನ್ನೂ ವಿದ್ಯುತ್ ಸಂಪರ್ಕ ನೀಡಿಲ್ಲ. ನೀಟ್ ಪರೀಕ್ಷೆ ಎದುರಿಸುತ್ತಿರುವ ವಿದ್ಯಾರ್ಥಿಗಳ ಪಾಡೇನು, ಜವಾಬ್ದಾರಿ ನಿರ್ವಹಿಸಲಾಗದ ಸದಸ್ಯೆ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮನೆಯಲ್ಲಿ ಉಳಿಯಬೇಕು. ಇಂತಹುದ್ದಕ್ಕೆ ನಗರಸಭೆಗೆ ಆಯ್ಕೆಯಾಗಿದ್ದಾದರೂ ಏಕೆ ಎಂದು ಖಾರವಾಗಿ ಪ್ರಶ್ನಿಸಿದರು.

ಪ್ರತಿಭಟನೆಯಲ್ಲಿ ರಮೇಶ್, ಮನೋಜ್‌ಕುಮಾರ್, ಜಗದೀಶ್, ಕೆಂಪಯ್ಯ, ಡಾ.ಪ್ರಸನ್ನಕುಮಾರ್, ವಿನುತಾ, ಕೃಷ್ಣೇಗೌಡ, ಶರತ್, ನಾಗೇಂದ್ರ ಗುಪ್ತ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net