

ಹೊಸದುರ್ಗ: ನಗರದಲ್ಲಿ ಆಚರಿಸಲಾಗುವ ಗಣಪತಿ ಮತ್ತು ಈದ್ ಮಿಲಾದ್ ಆಚರಣೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದರೆ
ಸಂಬಂಧಪಟ್ಟಆಯೋಜನಾ ಸಮಿತಿಗಳ ಎಲ್ಲ ಸದಸ್ಯರೂ ಹೊಣೆಗಾರರಾಗುತ್ತಾರೆ ಎಂದು ಡಿವೈಎಸ್‌ಪಿ ಚೈತ್ರಾ ಹೇಳಿದರು.
ಪಟ್ಟಣದ ಅಶೋಕ ರಂಗಮಂದಿರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗಣೇಶ ಹಬ್ಬದ ಶಾಂತಿ ಸಭೆಯಲ್ಲಿ ಮಾತನಾಡಿ, ಗಣಪತಿ ವಿಸರ್ಜನಾ ವೇಳೆಯೇ ಈದ್ ಮಿಲಾದ್ ಹಬ್ಬ ಬರುವ ಹಿನ್ನಲೆಯಲ್ಲಿ ಪೋಲಿಸರು ಸೂಚನೆ ನೀಡಿದಂತೆ ಆಯೋಜಕರು ಪಾಲಿಸಬೇಕು ಎಂದರು.
ಪ್ರತಿವರ್ಷ 11 ದಿನಕ್ಕೆ ವಿಸರ್ಜನೆಯಾಗುತ್ತಿದ್ದ ವಿರಾಟ್ ಹಿಂದೂ ಮಹಾಸಭಾ ಗಣಪತಿಯ ವಿಸರ್ಜನೆಯನ್ನು ಆಯೋಜಕರು ಸ್ವಯಂ ಪ್ರೇರಿತರಾಗಿ 13ನೇ ದಿನಕ್ಕೆ ಮಂದೂಡಿರುವುದು ಶ್ಲಾಘನೀಯ.
ಉತ್ಸವಕ್ಕೆ ಡಿಜೆ ಬಳಸಲು ಪೋಲಿಸ್ ಇಲಾಖೆ ಸೂಕ್ತ ಆದೇಶ ಹೊರಡಿಸಲಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರು ಪೋಲಿಸರಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಪೋಲಿಸ್ ನಿರೀಕ್ಷಕ ತಿಮ್ಮಣ್ಣ ಮಾತನಾಡಿ ಠಾಣೆಯ ವ್ಯಾಪ್ತಿಯಲ್ಲಿ 140 ಗಣೇಶ ಸಮಿತಿಗಳು ಸಾರ್ವಜನಿಕವಾಗಿ ಗಣೇಶೋತ್ಸವ ಆಚರಿಸುತ್ತವೆ. ನಿಯಮಗಳನ್ನು ಪಾಲಿಸುವ ಜವಾಬ್ದಾರಿ ಆಯೋಜಕರ ಮೇಲಿದೆ ಎಂದರು.
ಕೆಪಿಸಿಸಿ ಸದಸ್ಯ ಅಲ್ತಾಪ್ ಪಾಷ, ಪಿಎಸ್‌ಐಗಳಾದ ಇಮ್ರಾನ್, ಮಹೇಶ್ ಕುಮಾರ್, ಭೀಮನಗೌಡ ಪಾಟೀಲ್, ಮಾಜಿ ಪುರಸಭಾ ಅಧ್ಯಕ್ಷ ಎಂ.ಶ್ರೀನಿವಾಸ್, ಸದಸ್ಯ ಜಾಫರ್ ಸಾಧಿಕ್ ಇತರರಿದ್ದರು.