

ವಿಜಯವಾಣಿ ಸುದ್ದಿಜಾಲ ಉಡುಪಿ
ಯುವಜನತೆಯ ಉಜ್ವಲ ಭವಿಷ್ಯಕ್ಕಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವನಿಧಿಯು ಯುವಜನರಲ್ಲಿ ಆತ್ಮವಿಶ್ವಾಸ ದ್ವಿಗುಣಗೊಳಿಸಿದೆ. ಅವರಲ್ಲಿ ಸ್ವಾಭಿಮಾನವನ್ನೂ ಹೆಚ್ಚಿಸಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಡುಪಿ ಜಿಲ್ಲಾಧ್ಯಕ್ಷ ಅಶೋಕಕುಮಾರ್ ಕೊಡವೂರು ಅಭಿಮತ ವ್ಯಕ್ತಪಡಿಸಿದರು.
ಉಡುಪಿಯ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಉಡುಪಿ ವತಿಯಿಂದ ಜುಲೈ 28ರಂದು ಆಯೋಜಿಸಿದ್ದ ಯುವನಿಧಿ ಪ್ರಚಾರ ಮತ್ತು ನೋಂದಣಿ ಅಭಿಯಾನ ಉದ್ಘಾಟಿಸಿ ಮಾತನಾಡಿದರು.
ಸಂಸ್ಥೆಯ ಪ್ರಾಂಶುಪಾಲೆ ಉಮಾ ಬಿ. ನಾಯ್ಕ ಮಾತನಾಡಿ, ಡಿಪ್ಲೊಮಾ ಹಾಗೂ ಪದವಿ ಓದಿದ್ದರೂ ಸಹ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗ ಪಡೆಯುವುದು ಕಷ್ಟವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯ ಸಿದ್ಧತೆ, ಉದ್ಯೋಗ ಅರಸಿ ವಿವಿಧೆಡೆಗೆ ತೆರಳಲು ಆಗುವ ಖರ್ಚು-ವೆಚ್ಚಗಳಿಗೆ ಮನೆಯವರನ್ನು ಅವಲಂಬಿಸುವುದು ಈ ಯೋಜನೆಯಿಂದ ತಪ್ಪಿದೆ. ಅರ್ಹರೆಲ್ಲರೂ ಯೋಜನೆಯ ಪ್ರಯೋಜನ ಪಡೆಯಬೇಕು ಎಂದರು.
ಜಿಲ್ಲಾ ಉದ್ಯೋಗಾಧಿಕಾರಿ ಖಲಂದರ್ ಖಾನ್ ಮಾತನಾಡಿ, ಯೋಜನೆಯಲ್ಲಿ ನೋಂದಾಯಿಸುವ ರೀತಿ, ಉದ್ಯೋಗಕ್ಕೆ ತಕ್ಕಂತೆ ಕೌಶಲ ಹೆಚ್ಚಿಸುವ ಯುವನಿಧಿ ಪ್ಲಸ್, ಉದ್ಯೋಗ ವಿನಿಮಯ ಕಚೇರಿಯಿಂದ ಆಯೋಜಿಸಲಾಗುವ ಉದ್ಯೋಗಾವಕಾಶದ ಬಗ್ಗೆ ಮಾಹಿತಿ ನೀಡಿದರು.
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಟ್ರಸ್ಟಿ ಮೋಹನ ನಂಬಿಯಾರ್, ಸಂಸ್ಥೆಯ ಉಪನ್ಯಾಸಕರು, ಉದ್ಯೋಗ ವಿನಿಮಯ ಕಚೇರಿಯ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಉಪನ್ಯಾಸಕ ಕಿಶೋರಕುಮಾರ್ ಸ್ವಾಗತಿಸಿದರು. ಉದ್ಯೋಗ ವಿನಿಮಯ ಕೇಂದ್ರದ ದೀಕ್ಷಿತ್ ಕಾರ್ಯಕ್ರಮ ನಿರೂಪಿಸಿದರು.
ಯುವನಿಧಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸರಳವಿದೆ. ಸೇವಾಸಿಂಧು ಪೋರ್ಟಲ್ನಲ್ಲಿ ಅರ್ಜಿ ಸಲ್ಲಿಸಿದ ಪದವಿ, ಸ್ನಾತಕೋತ್ತರ ಪದವೀಧರರಿಗೆ 3 ಸಾವಿರ ರೂ., ಡಿಪ್ಲೊಮಾ ನಿರುದ್ಯೋಗಿಗಳಿಗೆ 1,500ರೂ.ವನ್ನು ಪ್ರತಿ ತಿಂಗಳು ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು. ಆದರೆ, ಫಲಾನುಭವಿಗಳು ಮೂರು ತಿಂಗಳಿಗೊಮ್ಮೆ ಸ್ವಯಂ ಘೋಷಣೆ ನೀಡುವುದು ಕಡ್ಡಾಯ. | ಅಶೋಕಕುಮಾರ್ ಕೊಡವೂರು. ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ