

ಮಂಡ್ಯ: ಕಾಂಗ್ರೆಸ್‌ನ ಗ್ಯಾರೆಂಟಿ ಕಾರ್ಡ್ ಹಾಗೂ ಗ್ರಾಮೀಣ ಜನರ ಮನ ಮುಟ್ಟುವಲ್ಲಿ ವೈಫಲ್ಯವಾದ ಹಿನ್ನೆಲೆಯಲ್ಲಿ ಸೋಲು ಅನುಭವಿಸಬೇಕಾಯಿತು ಎಂದು ಮಂಡ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಅಶೋಕ್ ಜಯರಾಂ ಹೇಳಿದರು.
ಗ್ರಾಮೀಣ ಭಾಗದ ಜನರ ನಾಡಿ ಮಿಡಿತವನ್ನು ಅರ್ಥ ಮಾಡಿಕೊಳ್ಳುವಲ್ಲಿ ನಾವು ವಿಫಲವಾಗಿದ್ದೇವೆ. ಕಾಂಗ್ರೆಸ್‌ನ ಗ್ಯಾರೆಂಟಿಯಲ್ಲಿ ಐದು ವಿಚಾರಗಳು ಜನರಿಗೆ ಹತ್ತಿರವಾದವು. ನಮ್ಮ ಪ್ರಣಾಳಿಕೆ ಸಹ ತಡವಾಗಿ ಹೊರಬಂದಿತ್ತು. ಇದು ನಮ್ಮ ಸೋಲಿಗೆ ಕಾರಣವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಗ್ರಾಮಾಂತರ ಪ್ರದೇಶಗಳಲ್ಲಿ ನಾವು ಪ್ರಚಾರಕ್ಕೆ ಹೋದ ವೇಳೆ ಜನತೆ ಅಡುಗೆ ಅನಿಲ ಹೆಚ್ಚಳದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಅಗತ್ಯ ವಸ್ತುಗಳ ಬೆಲೆ ಏರಿಕೆ ಕುರಿತು ಮಾತನಾಡಿದ್ದರು. ಇದೂ ಸಹ ಇದು ಸಹ ಒಂದು ಕಾರಣವಾಗಿದೆ. ಆದರೆ ಲೋಕಸಭಾ ವ್ಯಾಪ್ತಿಯಲ್ಲಿ ಬಿಜೆಪಿ ಕಳೆದ ಬಾರಿಗಿಂತಲೂ ಈ ಬಾರಿ ಹೆಚ್ಚಿನ ಮತ ಗಳಿಕೆಯನ್ನು ಪಡೆದುಕೊಂಡಿದೆ. ಅದು ಸಮಾಧಾನಕರವಾಗಿದೆ. ಕಳೆದ ಬಾರಿ ಬಿಜೆಪಿ ಅಭ್ಯರ್ಥಿಗಿಂತ ಈ ಬಾರಿ ಒಂದೂವರೆ ಸಾವಿರ ಮತಗಳು ಕಡಿಮೆಯಾಗಿದೆ. ಇದಕ್ಕೆ ಹಲವಾರು ಕಾರಣಗಳಿವೆ. ಮೂಲ ಮತ್ತು ವಲಸಿಗ ಕಾರ್ಯಕರ್ತರ ಸಮನ್ವಯತೆಯೂ ಒಂದಾಗಿರಬಹುದು. ಎರಡು ಬಾರಿ ಕ್ಷೇತ್ರದಾದ್ಯಂತ ಪ್ರಚಾರ ನಡೆಸಿದ್ದೇವೆ. ಆದರೂ ನಮ್ಮ ಕೈ ಹಿಡಿಯುವಲ್ಲಿ ಜನರು ಆಸಕ್ತಿ ವಹಿಸದಿರುವುದು ನಮ್ಮ ವೈಫಲ್ಯವೇ ಹೊರತು ಬೇರೆಯವರ ಮೇಲೆ ಹೊಣೆ ಹೊರಿಸುವುದು ಸಮಂಜಸವಲ್ಲ ಎಂದರು.
ಎಲ್ಲ ಆಡಳಿತಾರೂಢ ಪಕ್ಷಗಳ ಸರ್ಕಾರಗಳಲ್ಲೂ ಒಳ್ಳೆಯದ್ದು ಮತ್ತು ಕೆಟ್ಟದ್ದು ಇದ್ದೇ ಇರುತ್ತದೆ. ಜನ ಅದನ್ನು ಹೇಗೆ ಒಪ್ಪಿಕೊಳ್ಳುತ್ತಾರೆ ಎಂಬುದೇ ಮುಖ್ಯವಾಗಿರುತ್ತದೆ. 2018ರಲ್ಲಿ ಕಾಂಗ್ರೆಸ್ ವಿರೋಧಿ ಅಲೆ ಇತ್ತು. ಆಗ ನಮ್ಮ ಪಕ್ಷ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವುದಕ್ಕೆ ಸಾಧ್ಯವಾಗಿತ್ತು. ಈ ಬಾರಿ ಕಾಂಗ್ರೆಸ್ ಪರವಾದ ಅಲೆ ಇದ್ದುದರಿಂದಾಗಿ ಹೆಚ್ಚಿನ ಸ್ಥಾನಗಳನ್ನು ಅವರು ಗೆದ್ದಿದ್ದಾರೆ. ಬಿಜೆಪಿ ಪಕ್ಷಕ್ಕೆ ಮತ ಹಾಕಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.
ನಗರಾಧ್ಯಕ್ಷ ವಿವೇಕ್, ನಗರಸಭೆ ಮಾಜಿ ಸದಸ್ಯ ಚಂದ್ರು, ಭೀಮೇಶ್, ಸತೀಶ್, ಬಿಜೆಪಿ ಜಿಲ್ಲಾ ಕಚೇರಿ ಕಾರ್ಯದರ್ಶಿ ಹರ್ಷ ಇದ್ದರು.