ಬಡವರ ಮನೆಗೆ ರಾಜ್ಯಸರ್ಕಾರದ ಕನ್ನ: ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ

R Ashok
Published on

ಮಂಡ್ಯ: ರಾಜ್ಯ ಸರ್ಕಾರ ಬಡವರ ಅನ್ನ ಕೊಡುವ ಬದಲು ಅವರ ಮನೆಗಳಿಗೆ ಕನ್ನ ಹಾಕುತ್ತಿದೆ. ಇದಕ್ಕೆ ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕ ಬಿ.ಆರ್.ಪಾಟೀಲ್ ಮಾಡಿರುವ ಆರೋಪವೇ ಸಾಕ್ಷಿ. ಇದು ನುಡಿದಂತೆ ನಡೆಯುವ ಸರ್ಕಾರವಲ್ಲ. ಹಣ ಹೊಡೆಯುವ ಸರ್ಕಾರ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ದೂರಿದರು.

ರಾಜೀವ್‌ಗಾಂಧಿ ವಸತಿ ಯೋಜನೆ, ಪ್ರಧಾನಮಂತ್ರಿ ಅವಾಸ್ ಯೋಜನೆ, ಡಾ.ಬಿ.ಆರ್.ಅಂಬೇಡ್ಕರ್ ವಸತಿ ಯೋಜನೆ ಸೇರಿದಂತೆ ಎಲ್ಲ ವಸತಿ ಯೋಜನೆಗಳಲ್ಲಿ ಕಮೀಷನ್ ಮೂಲಕ ಹಣ ಹೊಡೆಯುವುದೇ ರಾಜ್ಯಸರ್ಕಾರದ ಛಾಳಿಯಾಗಿದೆ. ಈ ಹಗರಣ ಅವರ ಪಕ್ಷದ ಶಾಸಕರ ಮೂಲಕ ಬಯಲಿಗೆ ಬಂದಿದೆ ಎಂದು ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

ವಸತಿ ಯೋಜನೆಯಲ್ಲಿ ಈಗಾಗಲೇ ಅಲ್ಪಸಂಖ್ಯಾತರಿಗೆ ಶೇ.15ರಷ್ಟು ಮೀಸಲಾತಿ ನೀಡುವ ಮೂಲಕ ದಲಿತ, ಹಿಂದುಳಿದ ವರ್ಗಕ್ಕೆ ದೊಡ್ಡ ಅನ್ಯಾಯ ಮಾಡಿದೆ. ಹಿಂದುಳಿದ ಹಿಂದೂಗಳ ಮುಖಾಂತರ ಶೇ.60ರಷ್ಟು ಕಮೀಷನ್ ಹೊಡೆದು, ಶೇ.15ರಷ್ಟು ಮುಸ್ಲಿಂಮರಿಗೆ ಮೀಸಲಾತಿ ನೀಡುವ ಮೂಲಕ ನಮ್ಮದು ಟಿಪ್ಪು ಸರ್ಕಾರ ಎಂಬುದನ್ನು ಸಾಬೀತುಪಡಿಸಿದ್ದಾರೆ. ಇತ್ತೀಚೆಗೆ ಬಳ್ಳಾರಿಯಲ್ಲಿ ಸಂಕಲ್ಪ ಸಮಾವೇಶ ಮಾಡಿದ್ದರು. ಆದರೆ ಅದು ಸಂಕಲ್ಪವಲ್ಲ. ಬಡವರ ನಾಶ ಹಾಗೂ ಭ್ರಷ್ಟಾಚಾರದ ಸಂಕಲ್ಪ ಸಮಾವೇಶ. ಅಬಕಾರಿ, ವಾಲ್ಮೀಕಿ ನಿಗಮ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಹಗರಣ ನಡೆಸುವ ಮೂಲಕ ಅಧಿಕೃತವಾಗಿ ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಇದಕ್ಕೆ ಒಬ್ಬ ಮಂತ್ರಿ ರಾಜೀನಾಮೆ ಕೊಟ್ಟು ಜೈಲಿಗೆ ಹೋಗಿ ಬಂದರೆ ಹಾಗೂ ಸಿಎಂ 14 ನಿವೇಶನಗಳನ್ನು ವಾಪಸ್ ನೀಡಿದ್ದೇ ಸಾಕ್ಷಿ ಎಂದರು.

ಬಿ.ಆರ್.ಪಾಟೀಲ್ ತಮ್ಮ ಸರ್ಕಾರದ ವಿರುದ್ಧವೇ ಗಂಭೀರ ಆರೋಪ ಮಾಡಿದ್ದಾರೆ. ಈ ಆರೋಪವನ್ನು ಬೋಗಸ್ ಎಂದು ಬಿಂಬಿಸಲು ರಾಜ್ಯಸರ್ಕಾರ ಪ್ರಯತ್ನ ಮಾಡಿದ್ದು, ಪಾಟೀಲ್ ಅವರನ್ನು ಸಂಪರ್ಕಿಸಿದೆ. ಆದರೆ ಪಾಟೀಲ್ ಯಾರಿಗೂ ಅಂಜದೆ ಈ ಆಡಿಯೋ ನನ್ನದೇ ಎಂದು ಒಪ್ಪಿಕೊಂಡಿದ್ದಾರೆ. ಆದ್ದರಿಂದ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಬಿ.ಆರ್.ಪಾಟೀಲ್ ಹಿರಿಯ ರಾಜಕಾರಣಿ. ಮೇಲ್ಮನೆ ಉಪಸಭಾಪತಿಯಾಗಿ ಕೆಲಸ ಮಾಡಿದ್ದು, ಪ್ರಸ್ತುತ ನೀತಿ ಆಯೋಗದ ಉಪಾಧ್ಯಕ್ಷರಾಗಿದ್ದಾರೆ. ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನೇಮಕ ಮಾಡಿದ್ದಾರೆ. ಇಂತಹ ಸಂಭಾವ್ಯ ವ್ಯಕ್ತಿ ಸ್ವಪಕ್ಷದ ವಿರುದ್ಧ ಸುಳ್ಳು ಆರೋಪ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಗುಡುಗುವ ಸಿಎಂ ಸಿದ್ದರಾಮಯ್ಯ, ಈ ವಿಚಾರದಲ್ಲಿ ಮಾತ್ರ ಮೂಕ ರಾಮಯ್ಯ ಆಗಿದ್ದಾರೆ. ಪಾಟೀಲ್ ಅವರು ನಾನು ಇನ್ನೂ ಬಾಯಿಬಿಟ್ಟರೆ ಸರ್ಕಾರ ಮೂರು ದಿನವೂ ಉಳಿಯಲ್ಲ ಎಂದಿದ್ದಾರೆ. ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂಬುದಕ್ಕೆ ಇದೇ ಸಾಕ್ಷಿ. ನಮ್ಮ ಸರ್ಕಾರದ ವಿರುದ್ಧ ಶೇ.40 ಪರ್ಸೆಂಟ್ ಕಮೀಷನ್ ಆರೋಪ ಮಾಡಿ, ನಾವು ಅಧಿಕಾರಕ್ಕೆ ಬಂದ ಮೂರೇ ತಿಂಗಳಲ್ಲಿ ಬಿಜೆಪಿಗರನ್ನು ಜೈಲಿಗಟ್ಟುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಆದರೆ ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆದರೂ ಸುಮ್ಮನೆ ಕುಳಿತಿದ್ದಾರೆ. ನಮ್ಮ ವಿರುದ್ಧ ಶೇ.40 ಪರ್ಸೆಂಟ್ ಆರೋಪ ಮಾಡಿ ಅವರೇ ಶೇ.60 ಪರ್ಸೆಂಟ್ ನುಂಗುತ್ತಿದ್ದಾರೆ ಎಂದು ಕಿಡಿಕಾರಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಾಕತ್ತು ಮತ್ತು ಧಮ್ ಇದ್ದರೆ ಬಿ.ಆರ್.ಪಾಟೀಲ್ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಲಿ. ಇಲ್ಲವೇ ಉಪಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ತೊಲಗಲಿ. ಶೀಘ್ರದಲ್ಲಿ ನಡೆಯುವ ಬಿಹಾರ ಚುನಾವಣೆಗೆ ಕರ್ನಾಟಕದಲ್ಲಿ ಭ್ರಷ್ಟಾಚಾರದ ಮೂಲಕ ಸಂಪಾದಿಸಿ ಹಣವನ್ನು ಬಿಹಾರಕ್ಕೆ ಎಟಿಎಂ ಕಳುಹಿಸಲು ಹುನ್ನಾರ ನಡೆಸಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಬಿಹಾರ ಚುನಾವಣೆಗಾಗಿ ಸಚಿವರಿಗೆ ಟಾರ್ಗೆಟ್ ಕೊಟ್ಟಿದ್ದು, ಹೆಚ್ಚು ಹಣ ಕೊಡುವ ಸಚಿವರನ್ನು ಸಂಪುಟದಲ್ಲಿ ಮುಂದುವರೆಸುವ ಟಾಸ್ಕ್ ನೀಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ ಅವರು, ರಾಜ್ಯಸರ್ಕಾರದಲ್ಲಿ ಮನೆ ಪಡೆದ ಲಾನುಭವಿಗಳು ಅರ್ಹರೇ, ಅನರ್ಹರೇ ಎಂಬುದು ತನಿಖೆಯಾಗಬೇಕು. ಕಳೆದ ಬಜೆಟ್‌ನಲ್ಲಿ 12 ಲಕ್ಷ ಬಡವರಿಗೆ ಮನೆ ಕೊಡುವುದಾಗಿ ಸರ್ಕಾರ ಘೋಷಿಸಿತ್ತು. ಆದರೆ ಕನಿಷ್ಟ 6 ಲಕ್ಷ ಮನೆಗಳನ್ನು ನಿರ್ಮಿಸಿಲ್ಲ. ಕೇವಲ 2.75 ಲಕ್ಷ ಮನೆಗಳನ್ನು ಮಾತ್ರ ನಿರ್ಮಿಸಿದ್ದಾರೆ ಎಂದು ಕಿಡಿಕಾರಿದರು.

ಈ ಸರ್ಕಾರ ಹಾಲಿನ ಸಬ್ಸಿಡಿ ಹಣವನ್ನು ಬಿಡುವುದಿಲ್ಲ. ವಸತಿ ಯೋಜನೆಯ ಕಮೀಷನ್ ಹಗರಣವನ್ನು ಬಿಜೆಪಿ ಇಲ್ಲಿಗೆ ಬಿಡದೆ ಜೆಡಿಎಸ್‌ನೊಂದಿಗೆ ಸೇರಿ ಬೃಹತ್ ಹೋರಾಟ ನಡೆಸಲಾಗುವುದು. ವಿಧಾನಸಭೆಯಲ್ಲಿ ನಿಲುವಳಿ ಮಂಡಿಸಿ ಚರ್ಚೆ ನಡೆಸುವ ಮೂಲಕ ಹೋರಾಟ ಮಾಡಲಾಗುವುದು. ಮಾಹಿತಿ ಪ್ರಕಾರ ಬಸವ ವಸತಿ ಯೋಜನೆ, ಅಂಬೇಡ್ಕರ್ ಅವಾಸ್ ಯೋಜನೆ, ಪ್ರಧಾನಮಂತ್ರಿ ಅವಾಸ್ ಯೋಜನೆ, ವಾಜಪೇಯಿ ನಗರ ವಸತಿ ಯೋಜನೆ ಸೇರಿದಂತೆ ನಗರ ಮತ್ತು ಗ್ರಾಮಾಂತರ ಎಲ್ಲ ವಸತಿ ಯೋಜನೆಗಳಲ್ಲಿ ಕಳೆದ ಎರಡೂವರೆ ವರ್ಷದಲ್ಲಿ ರಾಜ್ಯ ಸರ್ಕಾರ 2,137.44 ಕೋಟಿ ರೂ ಕಮೀಷನ್ ಲೂಟಿ ಮಾಡಿದೆ. ಇದೊಂದು ದೊಡ್ಡ ಹಗರಣವಾಗಿದ್ದು, ಸಿಬಿಐ ಅಥವಾ ಹೈಕೋರ್ಟ್ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ಯುವ ಮುಖಂಡರಾದ ಇಂಡುವಾಳು ಸಚ್ಚಿದಾನಂದ, ಅಶೋಕ್ ಜಯರಾಂ, ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ನಾಗಾನಂದ್, ಆನಂದ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net