

ಮಂಡ್ಯ: ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹತ್ಯೆಗೆ ಸಂಚು ನಡೆದಿದೆ, ಅದರಲ್ಲಿ ಅನುಮಾನವಿಲ್ಲ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಟಿ.ರವಿ ಏನು ಹೇಳಿದ್ದಾರೋ ಅದರ ಬಗ್ಗೆ ತನಿಖೆಯಾಗಲಿದೆ. ಯಾರೇ ತಪ್ಪು ಮಾಡಿದ್ದರೂ ತಪ್ಪೇ. ಆದರೆ ತನಿಖೆ ಆಗುವುದಕ್ಕೂ ಮೊದಲೇ ಸಿ.ಟಿ.ರವಿ ಅವರನ್ನು ಕಬ್ಬಿನ ಗದ್ದೆಯಲ್ಲಿ ಇರಿಸಿದ್ದೇವು ಎನ್ನುತ್ತಾರೆ. ಹಾಗಿದ್ದರೆ ಇನ್ನು ಮುಂದೆ ಸಿಎಂ, ಗೃಹಸಚಿವರನ್ನು ಕಬ್ಬಿನ ಗದ್ದೆಯಲ್ಲಿಯೇ ಸೇಫ್ಟಿಯಾಗಿಡಲಿ. ಇನ್ನು ರವಿ ಹತ್ಯೆಗೆ ಸಂಚು ನಡೆದಿತ್ತು ಎಂದರು.
ಡಿಸಿಎಂ ಡಿ.ಕೆ.ಶಿವಕುಮಾರ್ ನನ್ನ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ನಾನು ಪೊಲೀಸ್ ಠಾಣೆಗೆ ಹೋಗಿದ್ದು ನಿಜ, ಅಲ್ಲಿ ಕುಳಿತ್ತಿದ್ದು ಸತ್ಯ. ಆದರೆ ಅಲ್ಲಿಗೆ ದೂರು ಕೊಡಲು ಹೋಗಿದ್ದೆ. 40 ಜನ ಸಿ.ಟಿ.ರವಿಯನ್ನ ಹೊಡೆದು ಕೊಲೆ ಮಾಡಲು ಪ್ರಯತ್ನ ಮಾಡಿದ್ದರ ವಿರುದ್ದ ದೂರು ಕೊಡುವುದಕ್ಕೆ ಹೋಗಿದ್ದೆ. ಸಿ.ಟಿ.ರವಿ ಬಿಡಿಸಿಕೊಂಡು ಬರಲು ಹೋಗಿದ್ದಲ್ಲ. ನಾನು ಗೃಹಸಚಿವ ಆಗಿದ್ದೆ. ಅವರಿಗಿಂತ ಕಾನೂನು ಗೊತ್ತಿದೆ. ಪರಮೇಶ್ವರ್, ಸಿಎಂ ಆ ವಿಚಾರದ ಬಗ್ಗೆ ಗೊತ್ತೆ ಇಲ್ಲ ಎನ್ನುತ್ತಾರೆ. ಹಾಗಾದ್ದರೆ ಇದನ್ನೆಲ್ಲ ಇನ್ಯಾರು ಮಾಡಿಸಿದ್ದಾರೆಂದ ಅಶೋಕ್, ಜಯಮಾಲಾ ಮಂತ್ರಿ ಆದಾಗ ಲಕ್ಷ್ಮೀ ಹೆಬ್ಬಾಳ್ಕರ್ ಸೇವೆ ಎಂದಿದ್ದರು. ಆಗ ಜಯಮಾಲಾ ಛೀಮಾರಿ ಹಾಕಿದ್ದರು. ಆದ್ದರಿಂದ ಮೊದಲು ಅವರು ಸಂಸ್ಕೃತಿ ಕಲಿಯಲಿ. ಆಗ ಏಕೆ ಇವರು ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ದ ಕ್ರಮ ಕೈಗೊಳ್ಳಲಿಲ್ಲ. ಸೇವೆ ಎಂದರೆ ಏನು. ಆಗ ಏಕೆ ಪ್ರಶ್ನೆ ಮಾಡಲಿಲ್ಲ. ನಮ್ಮನ್ನು ಏಕೆ ಈಗ ಕೇಳುತ್ತೀರಾ ಎಂದು ವಾಗ್ದಾಳಿ ನಡೆಸಿದರು.
ಸಿ.ಟಿ.ರವಿ ವಿರುದ್ಧ ಗೋಬ್ಯಾಕ್ ಚಳವಳಿ ಮಾಡಿದ್ದರ ಬಗ್ಗೆ ಪ್ರತಿಕ್ರಿಯಿಸಿ. ಪ್ರಗತಿಪರರು ಗೋ ಬ್ಯಾಕ್ ಎನ್ನಲೇಬೇಕು. ಏಕೆಂದರೆ ಅವರ ಸ್ವಾಗತ ನಕ್ಸಲರಿಗೆ ಮಾತ್ರ. ಪಾಕಿಸ್ತಾನ ಜಿಂದಾಬಾದ್ ಎಂದಾಗ ಬಾಯಿ ಮುಚ್ಚಿ ಕುಳಿತಿದ್ದರು. ಪಾಕಿಸ್ತಾನ ಜಿಂದಾಬಾದ್ ಎಂದರೆ ಇವರಿಗೆ ಏನು ಅನಿಸಲ್ಲ. ಈ ವಿಚಾರದ ಬಗ್ಗೆ ದೊಡ್ಡ ಮಾತನಾಡುತ್ತಾರೆ. ಪ್ರಗತಿಪರರು ಪಾಕಿಸ್ತಾನದ ಪರ ಇರುವವರು ಎಂದು ಟೀಕಿಸಿದರು.