

ಮಂಡ್ಯ: ಒಕ್ಕಲಿಗರ ಸಂಸ್ಥಾನ ಮಠದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ವಿರುದ್ಧ ಎ್ಐಆರ್ ದಾಖಲಿಸಿದ್ದಾರೆ. ಇದೇ ನೆಪವೊಡ್ಡಿ ಸ್ವಾಮೀಜಿ ಅವರನ್ನು ಮುಟ್ಟಿದರೆ ಹುಷಾರ್ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಎಚ್ಚರಿಕೆ ನೀಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರಿ, ರೈತರ ಜಮೀನುಗಳನ್ನು ನುಂಗುತ್ತಿದ್ದಾರೆ. ಅದರ ಬಗ್ಗೆ ಕ್ರಮವಿಲ್ಲ, ವಿಧಾನಸೌಧದ ಮೊಗಸಾಲೆಯಲ್ಲೇ ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಕೂಗಿದ್ದರು. ಏಕೆ ಪ್ರಕರಣ ದಾಖಲು ಮಾಡಲಿಲ್ಲ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಕರಿಯಾ ಎಂದು ನಿಂದಿಸಿದರು. ಆದರೂ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಭೈರವೈಕ್ಯ ಡಾ.ಬಾಲಗಂಗಾಧರನಾಥ ಸ್ವಾಮೀಜಿ ವಿರುದ್ಧ ಪ್ರಕರಣ ದಾಖಲಿಸಿದವರು ಯಾರು?. ಅದನ್ನು ಮಠದವರು ಹೇಳಬೇಕು. ನಾನು ಅರಣ್ಯ ಸಚಿವನಾಗಿಯೇ ಇಲ್ಲ. ಅಂದು ಚೆನ್ನಿಗಪ್ಪ ಅರಣ್ಯ ಸಚಿವರಾಗಿದ್ದವರು, ಅವರನ್ನು ಕೇಳಲಿ, ಅದು ಬಿಟ್ಟು ನನ್ನ ಮೇಲೆ ಹೇಳಿದರೆ ಹೇಗೆ ಎಂದು ಪ್ರಶ್ನಿಸಿದರು.
ಮೈಸೂರಿನ ಮುಡಾ ಪ್ರಕರಣ ಮುಚ್ಚಿಹಾಕಲು ಹಾಸನದಲ್ಲಿ ಸಮಾವೇಶ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ ಅಹಿಂದ ಜತೆಗಿತ್ತು ಎನ್ನುತ್ತಾರೆ. ಆದರೆ ಈಗ ಅ ಮಾತ್ರ ಇದೆ. ಮೈಸೂರಿನಲ್ಲಿ ಕುರುಬ ಸಮುದಾಯದವರಿಗೆ ಸೇರಿದ 110 ಮನೆಗಳು ವಕ್ಪ್ ಮಂಡಳಿಗೆ ಸೇರಿದ್ದೆಂದು ನೋಟೀಸ್ ನೀಡಲಾಗಿದೆ. ಇದು ಈ ಸರ್ಕಾರದ ಕಾರ್ಯವೈಖರಿ. ರಾಜ್ಯದಲ್ಲಿ ಬಾಣಂತಿಯರ ಸಾವಿನ ಸಂಖ್ಯೆ ಹೆಚ್ಚಾಗಿದೆ. ಸರ್ಕಾರ ಸಾವಿನ ಭಾಗ್ಯ ನೀಡುತ್ತಿದೆ. 111 ಶಿಶುಗಳ ಮಾರಣ ಹೋಮ ನಡೆದಿದೆ. ಒಂದು ಕಡೆ ಸರ್ಕಾರಿ ಆಸ್ಪತ್ರೆಯಲ್ಲಿ ಔಷಧ ಕೊರತೆ ಜತೆಗೆ ಕಳಪೆ ಔಷಧಗಳು ಸರಬರಾಜಾಗುತ್ತಿವೆ. ಇದು ಮೆಡಿಕಲ್ ಮಾಫಿಯ ಆಗಿದೆ. ಈ ಬಗ್ಗೆಯೂ ಸದನದಲ್ಲಿ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ರವಿಕುಮಾರ್, ಮುಖಂಡರಾದ ಇಂಡುವಾಳು ಸಚ್ಚಿದಾನಂದ, ಎಚ್.ಆರ್.ಅಶೋಕ್‌ಕುಮಾರ್ ಇತರರಿದ್ದರು.