

ಕುಶಾಲನಗರ:
ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತಂದಿರುವ ಮಹತ್ವಾಕಾಂಕ್ಷೆ ಯೋಜನೆಯಾದ ಆಶಾಕಿರಣ ದೃಷ್ಟಿಕೇಂದ್ರದ ಸೇವೆ ಪ್ರತಿ ಮನೆಗೂ ತಲುಪಬೇಕು ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಹೇಳಿದರು. ಜಿಲ್ಲಾಡಳಿತ, ಕೊಡಗು ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ, ರಾಷ್ಟ್ರೀಯ ಅಂಧತ್ವ ಮತ್ತು ದೃಷ್ಟಿ ಮಾಂದ್ಯತೆ ನಿಯಂತ್ರಣ ಕಾರ್ಯಕ್ರಮ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಕುಶಾಲನಗರ ಹಾಗೂ ಸಮುದಾಯ ಆರೋಗ್ಯ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಆಶಾಕಿರಣ ದೃಷ್ಟಿಕೇಂದ್ರ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ 1 ಕೋಟಿ ಜನರಿಗೆ ದೃಷ್ಟಿ ಸಮಸ್ಯೆ ಇದೆ. 5 ವರ್ಷದಿಂದ 90 ವರ್ಷದ ವರೆಗೆ ಕಣ್ಣಿನ ಸಮಸ್ಯೆ ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ಅಂಧತ್ವ ಕಡಿಮೆ ಮಾಡಬೇಕು ಎಂಬ ಉದ್ದೇಶದಿಂದ ಆಶಾಕಿರಣ ದೃಷ್ಟಿ ಕೇಂದ್ರ ಸ್ಥಾಪಿಸಲಾಗಿದೆ. ಪ್ರತಿ ಮನೆಗೆ ಈ ಸೇವೆ ತಲುಪಿಸಬೇಕು.
ಉಚಿತವಾಗಿ ಪರೀಕ್ಷೆ ಮಾಡಿ ಕನ್ನಡಕವನ್ನು ಕೊಡಬೇಕು. ಹೆಚ್ಚಿನ ಚಿಕಿತ್ಸೆ ಅಗತ್ಯತೆ ಕಂಡುಬAದರೆ ಜಿಲ್ಲಾಸ್ಪತ್ರೆಗೆ ಕಳುಹಿಸಬೇಕು. ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದ ವಿವಿಧ ಕಾಮಗಾರಿಗಳಿಗೆ 82 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ. ಸತೀಶ್ ಕುಮಾರ್ ಮಾತನಾಡಿ, ಆಶಾಕಿರಣ ಯೋಜನೆ ಸರ್ಕಾರದ ಕನಸಿನ ಯೋಜನೆಯಾಗಿದೆ. ಬಡವರಿಗೆ, ಜನಸಾಮಾನ್ಯರಿಗೆ ಕಣ್ಣಿನ ತೊಂದರೆಗೆ ಉಚಿತ ಚಿಕಿತ್ಸೆ ಮಾಡಿ ಕನ್ನಡಕ ಕೊಡಲಾಗುತ್ತಿದೆ. ರಾಜ್ಯಾದ್ಯಂತ ಹಾಗೂ ಜಿಲ್ಲೆಯಲ್ಲೂ ಈ ಯೋಜನೆ ಅನುಷ್ಠಾನಗೊಂಡಿದೆ. ಕಳೆದ ವರ್ಷ ಆರು ಸಾವಿರ ಜನರಿಗೆ ತಪಾಸಣೆ ಮಾಡಲಾಗಿತ್ತು. ಈ ವರ್ಷ ಕೂಡ ತಪಾಸಣೆ ಮಾಡಲಾಗುತ್ತಿದ್ದು, ಇದುವರೆಗೆ 1220 ಮಂದಿಗೆ ಕನ್ನಡಕ ನೀಡಲಾಗಿದೆ. ಜನರು ಕಣ್ಣಿನ ಸಮಸ್ಯೆಯಿಂದ ಬಳಲಬಾರದು. ಬಡವರಿಗೆ ಈ ಸೇವೆ ದೊರೆಯಬೇಕು ಎನ್ನುವುದು ಸರ್ಕಾರದ ಆಶಯವಾಗಿದೆ ಎಂದರು.
ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ, ಎಲ್ಲಾ ಆಶಾ ಕಿರಣ ದೃಷ್ಟಿ ಕೇಂದ್ರದಲ್ಲಿ ಉಚಿತವಾಗಿ ಕಣ್ಣಿನ ತಪಾಸಣೆ ಹಾಗೂ ಉಚಿತ ಕನ್ನಡಕಗಳನ್ನು ವಿತರಣೆ ಮಾಡಲಾಗುತ್ತಿದೆ. ಈ ಸೌಲಭ್ಯವನ್ನು ಜನರು ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಂಜುನಾಥ್ ಗುಂಡೂರಾವ್ ಮಾತನಾಡಿ, ಸರ್ಕಾರ ಜಾರಿಗೆ ತಂದಿರುವ ಮಹಾತ್ವಕಾಂಕ್ಷೆಯೋಜನೆ ಆಶಾ ಕಿರಣ ದೃಷ್ಟಿ ಕೇಂದ್ರವನ್ನು ಶಾಸಕರು ಉದ್ಘಾಟಿಸಿದ್ದಾರೆ. ಅದೇ ರೀತಿ ಹೃದಯಾಘಾತಕ್ಕೆ ತುತ್ತಾದ ವ್ಯಕ್ತಿ ಮೈಸೂರು, ಬೆಂಗಳೂರು ಆಸ್ಪತ್ರೆಗೆ ಹೋಗುವ ಮುಂಚೆ ತುರ್ತುಚಿಕಿತ್ಸೆ ನೀಡಲು ಪ್ರಥಮವಾಗಿ ಕುಶಾಲನಗರ ಆಸ್ಪತ್ರೆಯಲ್ಲಿ ಅವಕಾಶ ಮಾಡಿಕೊಡಲಾಗಿದ್ದು, ಈ ಸೌಲಭ್ಯ ಕುರಿತು ಜನರಿಗೆ ಅರಿವು ಮೂಡಿಸಬೇಕು ಎಂದರು
ಕೊಡಗು ಜಿಲ್ಲಾ ಅಂಧತ್ವ ನಿರ್ಮೂಲನಾ ಅಧಿಕಾರಿ ಡಾ. ಆನಂದ್, ಆರೋಗ್ಯರಕ್ಷಾ ಸಮಿತಿ ಸದಸ್ಯ ದಾಮೋದರ್, ಕೂಡಿಗೆ ಟಿ.ಪಿ. ಹಮೀದ್, ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್ ,ಆರೋಗ್ಯ ಇಲಾಖೆಯ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಚ್.ಕೆ. ಶಾಂತಿ, ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ.ಎಂ.ಎನ್. ಮಧುಸೂದನ್, ವೈದ್ಯರು, ದಾದಿಯರು, ಇಲಾಖಾ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರು ಪಾಲ್ಗೊಂಡಿದ್ದರು.