ಆಷಾಢ ಮಾಸದ ಅಜ್ಜಿ ಹಬ್ಬ

BSP
Published on

ಸಾಸ್ವೆಹಳ್ಳಿ: ಹೋಬಳಿ ಕೇಂದ್ರದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಆಷಾಢ ಮಾಸದ ಆಷಾಢ ಅಜ್ಜಿ ಹಬ್ಬವನ್ನು ಶುಕ್ರವಾರ ಸಂಭ್ರಮದಿಂದ ಆಚರಿಸಿದರು.

ಹೋಬಳಿಯ ಹುಣಸಘಟ್ಟ, ಕ್ಯಾಸಿನಕೆರೆ, ತ್ಯಾಗದಕಟ್ಟೆ, ಲಿಂಗಾಪುರ, ಹೊಸಹಳ್ಳಿ, ಚೀಲಾಪುರ, ಚೆನ್ನೆನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಜಿಟಿ ಜಿಟಿ ಮಳೆಯಲ್ಲಿ ಹೋಳಿಗೆ ಮಾಡುವ ಮೂಲಕ ಆಷಾಢ ಅಜ್ಜಿ ಹಬ್ಬ ಆಚರಿಸಿದರು.

ರೈತಾಪಿ ವರ್ಗದ ಜನರ ಬಿತ್ತನೆ ಕಾರ್ಯಗಳೆಲ್ಲ ಪೂರ್ಣಗೊಂಡ ನಂತರ ಬರುವ ಈ ಹಬ್ಬದಲ್ಲಿ, ಬಿತ್ತನೆ ಮಾಡಿದ ಬೆಳೆಗಳು ಸಮೃದ್ಧಿಯಾಗಿ ಬೆಳೆಯಲು, ದನ ಕರುಗಳಿಗೆ ರೋಗ- ರುಜಿನ ಬಾರದಿರಲಿ, ಆರೋಗ್ಯ ಸಮೃದ್ಧಿಯಾಗಿ ಗ್ರಾಮದಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸಲೆಂದು ದೇವರಿಗೆ ಪ್ರಾರ್ಥನೆ ಸಲ್ಲಿಸಿದರು.

ಹೊಸ ಬಿದಿರಿನ ಮರದಲ್ಲಿ ಬಾಳೆ ಎಲೆ ಹಾಕಿ ಅದರ ಮೇಲೆ ಕುಂಬಾರರ ಮನೆಯಿಂದ ತಂದ ಮಣ್ಣಿನ ಕುಡಿಕೆ ಇಟ್ಟು, ಕೇಲಿಗೆ ವೀಳ್ಯದೆಲೆ, ಬೇವಿನ ಸೊಪ್ಪು, ಅರಿಶಿಣ, ಕುಂಕುಮ, ಬಾಳೆ ಬಿಚ್ಚಲಿಯಿಂದ ಸಿಂಗರಿಸಿ ಕೇಲನ್ನು ದೇವರ ಜಗುಲಿಯ ಮೇಲೆ ಇಟ್ಟು ಎಡೆ ಮಾಡಿ ಪೂಜಿಸಿದರು.

ನಂತರ ಗ್ರಾಮದ ಹೊರವಲಯದ ಬೇವಿನ ಕಟ್ಟೆ ಅಥವಾ ಶಮೀ ವೃಕ್ಷದ ಬಳಿ ಮರದಮ್ಮನ ಗದ್ದಿಗೆಯ ಮೇಲೆ ಇಟ್ಟು ಪೂಜಿಸಿ ಎಡೆ ಅರ್ಪಿಸಿದರು. ನಂತರ ಸಾಮೂಹಿಕ ಭೋಜನ ಸವಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net