ಚಾಮುಂಡಿಬೆಟ್ಟದಲ್ಲಿ ಆಷಾಢ ಸಂಭ್ರಮ: ದೇವಿ ದರ್ಶನ ಪಡೆದು ಧನ್ಯರಾದ ಭಕ್ತವೃಂದ

ashada shukravara
Published on

ಮೈಸೂರು: ಮೋಡ ಕವಿದ ವಾತಾವರಣ, ತುಂತುರು ಮಳೆಯ ನಡುವೆ ಸಹಸ್ರಾರು ಭಕ್ತಾದಿಗಳು 3ನೇ ಆಷಾಢ ಶುಕ್ರವಾರ ಹಿನ್ನೆಲೆಯಲ್ಲಿ ಶುಕ್ರವಾರ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಪೂಜಾ ಮಹೋತ್ಸವದಲ್ಲಿ ಪಾಲ್ಗೊಂಡು ನಾಡಿನ ಅಧಿದೇವತೆ ತಾಯಿ ಶ್ರೀ ಚಾಮುಂಡೇಶ್ವರಿ ದರ್ಶನ ಪಡೆದರು.

ರಾಜ್ಯದ ವಿವಿಧೆಡೆ ಮುಂಗಾರು ಅಬ್ಬರಿಸುತ್ತಿದ್ದು, ನಗರದಲ್ಲಿ ಮೋಡ ಕವಿದ ವಾತಾವರಣ ಕಾಣಿಸಿಕೊಂಡು ತುಂತುರು ಮಳೆ ಸುರಿ ಯಿತು. ನಗರದಲ್ಲಿ ಮಳೆ ಅಬ್ಬರಿಸದ ಹಿನ್ನೆಲೆಯಲ್ಲಿ ಭಕ್ತಾದಿಗಳಿಗೆ ದೇವಿಯ ದರ್ಶನ ಪಡೆಯಲು ಅಡ್ಡಿ ಎದುರಾಗಲಿಲ್ಲ. ಮೊದಲನೇ ಆಷಾಢ ಶುಕ್ರವಾರ ಸಂದರ್ಭ ಮಳೆಯ ನಡುವೆಯೇ ಭಕ್ತಾದಿಗಳು ದೇವಿಯ ದರ್ಶನ ಪಡೆದಿದ್ದರು. ಮುಂಗಾರು ಅಗಮನದ ಹಿನ್ನೆಲೆಯಲ್ಲಿ ನಗರದಲ್ಲಿ ತಣ್ಣನೆಯ ವಾತಾವರಣ ನಿರ್ಮಾಣವಾಗಿತ್ತು. ಜನರು ಕೊರೆಯುವ ಚಳಿಯನ್ನೂ ಲೆಕ್ಕಿಸದೆ ತಾಯಿ ಶ್ರೀ ಚಾಮುಂಡೇಶ್ವರಿ ದರ್ಶನ ಪಡೆದರು.

ದೇವಿಗೆ ಮಹಾಲಕ್ಷ್ಮಿ ಅಲಂಕಾರ

ಆಷಾಢ ಶುಕ್ರವಾರ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ದೇವಿಗೆ ಪ್ರಧಾನ ಅರ್ಚಕ ಡಾ.ಎನ್.ಶಶಿಶೇಖರ್ ದೀಕ್ಷಿತ್ ನೇತೃತ್ವದಲ್ಲಿ ವಿಶೇಷ ಪೂಜಾ ಕೈಂಕರ್ಯ ನಡೆಯಿತು. ಮುಂಜಾನೆ 3.30 ರಿಂದ ದೇವಿಗೆ ರುದ್ರಾಭಿಷೇಕ, ಮಹಾನ್ಯಾಸಕ ಪೂರ್ವಕ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ಅಭಿಷೇಕ ನೆರವೇರಿಸಲಾಯಿತು. ಮೂರನೇ ಶುಕ್ರವಾರ ಚಾಮುಂಡೇಶ್ವರಿ ದೇವಿಗೆ ಮಹಾಲಕ್ಷ್ಮಿ ಅಲಂಕಾರ ಮಡಲಾಗಿತ್ತು.

ಪೂಜಾ ಕೈಂಕರ್ಯದ ಬಳಿಕ ಭಕ್ತಾದಿಗಳಿಗೆ ಬೆಳಗ್ಗೆ 5.30ರ ನಂತರ ದೇವಿಯ ದರ್ಶನಕ್ಕೆ ಅವಕಾಶ ನೀಡಲಾಯಿತು. ಬೆಳಗ್ಗೆ 9.30ಕ್ಕೆ ಉತ್ಸವ ಮೂರ್ತಿ ಮೆರವಣಿಗೆ ಮಾಡಿ ಸಂಪ್ರದಾಯದಂತೆ ಪೊಲೀಸ್ ಪೇದೆಯಿಂದ ಗನ್ ಸೆಲ್ಯೂಟ್ ಸಲ್ಲಿಸಲಾಯಿತು. ರಾತ್ರಿ 9.30 ರವರೆಗೂ ಭಕ್ತರಿಗೆ ದೇವಿ ದರ್ಶನಕ್ಕೆ ಅವಕಾಶ ನೀಡಲಾಯಿತು. ಮುಂಜಾನೆಯಿಂದ ರಾತ್ರಿವರೆಗೆ ಸಾವಿರಾರು ಭಕ್ತರು ಬೆಟ್ಟಕ್ಕೆ ಬಂದು ದೇವಿಯ ದರ್ಶನ ಪಡೆದರು. ದೇವಿಯ ದರ್ಶನ ಪಡೆಯಲು ಜನರು ರಾತ್ರಿಯೇ ಮೆಟ್ಟಿಲು ಮೂಲಕ ದೇವಸ್ಥಾನಕ್ಕೆ ಆಗಮಿಸಿದ್ದರು. ಬೆಳಗ್ಗೆ 5.30ಕ್ಕೆ ದೇವಾಲಯದ ಬಾಗಿಲು ತೆರೆಯುತ್ತಿದ್ದಂತೆಯೇ ದೇವಾಲಯ ಪ್ರವೇಶಿಸಿ ದೇವಿಯ ದರ್ಶನ ಪಡೆದು ಪುನೀತರಾದರು.

ಹೂಗಳಿಂದ ಕಂಗೊಳಿಸಿದ ದೇವಾಲಯ

ಆಷಾಢ ಶುಕ್ರವಾರ ಹಿನ್ನೆಲೆಯಲ್ಲಿ ದೇವಾಲಯವನ್ನು ವಿವಿಧ ಬಣ್ಣದ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ದೇವಾಲಯ ಗರ್ಭಗುಡಿಯ ಮುಂಭಾಗದ ಪ್ರಾಂಗಣ, ಗರುಡ ಕಂಬದ ಮುಂಭಾಗ ಸೇರಿದಂತೆ ವಿವಿಧೆಡೆ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ಭಕ್ತಾದಿಗಳಿಗೆ ದೇವಾಲಯ ಆವರಣದ ಮಲ್ಟಿಲೆವೆಲ್ ಪಾರ್ಕಿಂಗ್ ಕಟ್ಟಡದಲ್ಲಿ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ದರ್ಶನ ಪಡೆದ ನಂತರ ಭಕ್ತರು ಪ್ರಸಾದ ಸ್ವೀಕರಿಸಿದರು.

ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಚಾಮುಂಡಿಬೆಟ್ಟದ ಮೆಟ್ಟಿಲು ಹತ್ತಿ ಬಂದು ದೇವಿಯ ದರ್ಶನ ಪಡೆದರು. ಇನ್ನುಳಿದವರು ಬಸ್‌ನಲ್ಲಿ ಆಗಮಿಸಿ ದೇವಿಯ ದರ್ಶನ ಪಡೆದರು. ಕೆಲವರು ಮುಖ್ಯ ರಸ್ತೆಯಲ್ಲಿ ಪಾದಯಾತ್ರೆ ಮೂಲಕ ಆಗಮಿಸಿದರು. ಆಷಾಢ ಶುಕ್ರವಾರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ದೇವಸ್ಥಾನಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಖಾಸಗಿ ವಾಹನಗಳು ಬೆಟ್ಟಕ್ಕೆ ತೆರಳುವುದನ್ನು ನಿರ್ಬಂಧಿಸಲಾಗಿತ್ತು. ವಿಐಪಿಗಳು, ಪೂಜಾ ಮಹೋತ್ಸವದ ಕರ್ತವ್ಯಕ್ಕೆ ನಿಯೋಜನೆಗೊಂಡವರು ಹಾಗೂ ಚಾಮುಂಡಿಬೆಟ್ಟ ಗ್ರಾಮದ ನಿವಾಸಿಗಳ ವಾಹನಗಳಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗಿತ್ತು.

ದೇವಿಯ ದರ್ಶನಕ್ಕೆ ಭಕ್ತಾದಿಗಳಿಗೆ ಸರತಿ ಸಾಲು ನಿರ್ಮಾಣ ಮಾಡಲಾಗಿತ್ತು. ಎತ್ತರದ ಬ್ಯಾರಿಕೇಡ್‌ಗಳನ್ನು ಹಾಕಿದ್ದರಿಂದ ಒಂದು ಸಾಲಿನಿಂದ ಮತ್ತೊಂದು ಸಾಲಿಗೆ ಜಿಗಿಯಲು ಅವಕಾಶವಿರಲಿಲ್ಲ. ಅಲ್ಲದೆ ದೇವಸ್ಥಾನದವರೆಗೆ ವಾಹನಗಳ ಪ್ರವೇಶ ನಿರ್ಬಂಧಿಸಿದ್ದರಿಂದ ಯಾವುದೇ ಸಮಸ್ಯೆಗಳು ಎದುರಾಗಲಿಲ್ಲ. ಮಹಿಷಾಸುರ ಪ್ರತಿಮೆ ಬಳಿ ಬ್ಯಾರಿಕೇಡ್ ಹಾಕಿ ಗಣ್ಯರನ್ನು ದೇವಸ್ಥಾನಕ್ಕೆ ಕರೆ ತರಲು ವಿದ್ಯುತ್ ಚಾಲಿತ ವಾಹನದ ವ್ಯವಸ್ಥೆ ವಾಡಲಾಗಿತ್ತು. ಇದರಿಂದಾಗಿ ಯಾವುದೇ ಗೊಂದಲ, ನೂಕಾಟ, ತಳ್ಳಾಟಗಳಿಗೆ ಆಸ್ಪದವಿರಲಿಲ್ಲ. ಸಾರ್ವಜನಿಕರಿಗೆ ಉಚಿತ ದರ್ಶನ, 50 ರೂ., 100 ರೂ. ಹಾಗೂ 300 ರೂ.ಗಳ ವಿಶೇಷ ದರ್ಶನಕ್ಕೆ ಪ್ರತ್ಯೇಕ ಸರತಿ ಸಾಲುಗಳನ್ನು ನಿರ್ಮಾಣ ಮಾಡಲಾಗಿತ್ತು. ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಲು ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net