ಆಷಾಢ ಶುಕ್ರವಾರ : ಚಾಮುಂಡಿಬೆಟ್ಟದಲ್ಲಿ ವರ್ಷಧಾರೆ ನಡುವೆ ದೇವಿ ದರ್ಶನ

Ashada
Published on

ಮೈಸೂರು: ಆಷಾಢ ಮಾಸದ ಮೊದಲ ಶುಕ್ರವಾರ ನಗರದ ಚಾಮುಂಡಿಬೆಟ್ಟಕ್ಕೆ ಜನಸ್ತೋಮವೇ ಹರಿದು ಬಂತು. ಸಹಸ್ರಾರು ಭಕ್ತಾದಿಗಳು ಬೆಟ್ಟದ ತಾಯಿ ಶ್ರೀ ಚಾಮುಂಡೇಶ್ವರಿಯ ದರ್ಶನ ಪಡೆದು ಪುನೀತರಾದರು. ಮೊದಲ ಶುಕ್ರವಾರ ತಾಯಿ ಚಾಮುಂಡೇಶ್ವರಿ ನಾಗಲಕ್ಷ್ಮೀ ಅಲಂಕಾರದಲ್ಲಿ ಕಂಗೊಳಿಸಿದಳು.

ಭಕ್ತಾದಿಗಳು ಮಳೆ, ಗಾಳಿ ಲೆಕ್ಕಿಸದೆ ರಾತ್ರಿ 3 ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು. ಮಧ್ಯಾಹ್ನ ನಂತರ ಧಾರಾಕಾರ ಮಳೆ ಸುರಿದರೂ ಭಕ್ತಾದಿಗಳು ಮಳೆಯ ನಡುವೆ ತಾಯಿ ಶ್ರೀ ಚಾಮುಂಡೇಶ್ವರಿಯ ದರ್ಶನ ಪಡೆದರು. ಮಳೆಯಿಂದ ವಿಶೇಷವಾಗಿ ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ಸಮಸ್ಯೆ ಎದುರಿಸಿದರು.

ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಚಾಮುಂಡಿಬೆಟ್ಟದ ಮೆಟ್ಟಿಲು ಹತ್ತಿ ಬಂದು ದೇವಿಯ ದರ್ಶನ ಪಡೆದರು. ಇನ್ನುಳಿದವರು ಬಸ್‌ನಲ್ಲಿ ಆಗಮಿಸಿ ದೇವಿಯ ದರ್ಶನ ಪಡೆದರು. ಕೆಲವರು ಮುಖ್ಯ ರಸ್ತೆಯಲ್ಲಿ ಪಾದಯಾತ್ರೆ ಮೂಲಕ ಆಗಮಿಸಿದರು. ಆಷಾಢ ಶುಕ್ರವಾರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ದೇವಸ್ಥಾನಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಖಾಸಗಿ ವಾಹನಗಳು ಬೆಟ್ಟಕ್ಕೆ ತೆರಳುವುದನ್ನು ನಿರ್ಬಂಧಿಸಲಾಗಿತ್ತು. ವಿಐಪಿಗಳು, ಪೂಜಾ ಮಹೋತ್ಸವದ ಕರ್ತವ್ಯಕ್ಕೆ ನಿಯೋಜನೆಗೊಂಡವರು ಹಾಗೂ ಚಾಮುಂಡಿಬೆಟ್ಟ ಗ್ರಾಮದ ನಿವಾಸಿಗಳ ವಾಹನಗಳಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗಿತ್ತು.

ಬೆಳಗ್ಗೆ 5ರ ನಂತರ ಭಕ್ತಾದಿಗಳಿಗೆ ಬೆಟ್ಟಕ್ಕೆ ಪ್ರವೇಶ ಕಲ್ಪಿಸಲು ಜಿಲ್ಲಾಡಳಿತ ಚಿಂತನೆ ನಡೆಸಿತ್ತು. ಆದರೆ, ಭಕ್ತಾದಿಗಳು ರಾತ್ರಿ 2 ಗಂಟೆಗೆ ಆಗಮಿಸಲು ಪ್ರಾರಂಭಿಸಿದರು. ಹೀಗಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳು ಮುಂಜಾನೆ 3ರ ನಂತರ ಸಂಚಾರ ಪ್ರಾರಂಭಿಸಿದವು. ಬೆಟ್ಟದ ಮೆಟ್ಟಿಲು ಹತ್ತಲು ಮುಂಜಾನೆ 3ರ ನಂತರ ಅವಕಾಶ ನೀಡಲಾಯಿತು. ಭಕ್ತಾದಿಗಳು ಪ್ರತಿಯೊಂದು ಮೆಟ್ಟಿಲುಗಳಿಗೆ ಅರಿಸಿಣ, ಕುಂಕುಮವನ್ನು ಹಚ್ಚಿ ತಮ್ಮ ಭಕ್ತಿ ತೋರ್ಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net