

ಮಂಡ್ಯ: ಪಾಲಕರು ಮಕ್ಕಳಿಗೆ ಬಾಲ್ಯದಿಂದಲೇ ಸಂಸ್ಕಾರ ಹೇಳಿಕೊಡಬೇಕು ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ನಗರದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಬಾಲಗಂಗಾಧರನಾಥ ಸಮುದಾಯ ಭವನದಲ್ಲಿ ಜಿಲ್ಲಾ ಚುಂಚಶ್ರೀ ಮಹಿಳಾ ಒಕ್ಕಲಿಗರ ವೇದಿಕೆ ವತಿಯಿಂದ ಆಯೋಜಿಸಿದ್ದ ಸಾಮೂಹಿಕ ಮಹಾಲಕ್ಷ್ಮೀ ಆಷಾಢ ಮಾಸದ ಪೂಜಾ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಹುಮುಖ್ಯವಾಗಿ ಮಕ್ಕಳನ್ನು ಹೆತ್ತಿ, ಬೆಳೆಸಿ ಸಂಸ್ಕಾರ ಕೊಡುವ ಶಕ್ತಿ ಇರುವುದು ತಾಯಂದಿರಲ್ಲಿ. ಅವರಿಗೆ ಸಂಸ್ಕಾರವಿಲ್ಲವೆಂದರೆ ತಂದೆ ಏನು ಮಾಡಲು ಸಾಧ್ಯವಿಲ್ಲ. ಆದ್ದರಿಂದ ಆಧುನಿಕತೆ ಕಾಲದಲ್ಲಿ ಸಂಸ್ಕಾರದ ಕೊರತೆ ಎದ್ದು ಕಾಣುತ್ತಿರುವ ಸಂದರ್ಭದಲ್ಲಿ ಸಂಸ್ಕಾರಯುತ ಇಂತಹ ಕಾರ್ಯಕ್ರಮಗಳು ತಾಯಂದಿರಿಗೆ ಹೆಚ್ಚೆಚ್ಚು ಬೇಕು ಎಂದು ಹೇಳಿದರು.
ಆದಿಚುಂಚನಗಿರಿ ಕೊಮ್ಮೇರಹಳ್ಳಿ ಶಾಖಾ ಮಠದ ಮುಖ್ಯಸ್ಥ ಪುರುಷೋತ್ತಮಾನಂದನಾಥ ಸ್ವಾಮೀಜಿ, ಚುಂಚಶ್ರೀ ಮಹಿಳಾ ಒಕ್ಕಲಿಗರ ವೇದಿಕೆಯ ಪಲ್ಲವಿ, ಶಕುಂತಲಾ, ಮಂಜುಳಾ, ಲತಾ ಇತರರಿದ್ದರು.
ಇದೇ ವೇಳೆ ಸಾಮೂಹಿಕ ಮಹಾಲಕ್ಷ್ಮೀ ಆಷಾಢಮಾಸದ ಪೂಜಾ ಮಹೋತ್ಸವದ ಅಂಗವಾಗಿ ಗಣಪತಿ ಪೂಜೆ, ಮಹಾಲಕ್ಷ್ಮೀ ಸಹಸ್ರನಾಮಾವಳಿ ಪೂರ್ವಕ ಕುಂಕುಮಾರ್ಚನೆ, ಅಷ್ಟೋತ್ತರ ಶತನಾಮ, ಲಕ್ಷಾರ್ಚನೆ, ಪುಷ್ಪಾರ್ಚನೆ, ಪ್ರಾರ್ಥನೆ ಸಂಕಲ್ಪವಾಹನದಿಂದ ಪ್ರಾರಂಭ ಮಹಾಮಂಗಳಾರತಿ ನಂತರ ತೀರ್ಥಪ್ರಸಾದ ವಿನಿಯೋಗ ನಡೆಯಿತು.