

ಕಾರವಾರ: ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿAದ ಆಗಸ್ಟ್ 12 ರಿಂದ 14 ರವರೆಗೆ ಕಾರವಾರ ಜಿಲ್ಲಾಧಿಕಾರಿ ಕಚೇರಿಯ ಎದುರು ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಸಂಘಟನೆಯ ಉಪಾಧ್ಯಕ್ಷ ಗಂಗಾಧರ ಬಡಿಗೇರ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರೋನಾ ವೇಳೆಯಲ್ಲಿ ಆಶಾ ಕಾರ್ಯಕರ್ತೆಯರು ಜೀವದ ಹಂಗು ತೊರೆದು ಕೆಲಸ ಮಾಡಿದ್ದರು. ಆದರೆ, ಅವರಿಗೆ ನಿರ್ದಿಷ್ಟ ಆದಾಯ, ಭದ್ರತೆ ಇಲ್ಲದಂತಾಗಿದೆ. ರಾಜ್ಯ ಸರ್ಕಾರದಿಂದ 5 ಸಾವಿರ ರೂ. ನಿಶ್ಚಿತವಾಗಿ ಬರುತ್ತಿದೆ. ಕೇಂದ್ರದಿಂದ ಕನಿಷ್ಟ 2 ಸಾವಿರ ಇನ್ಸೆಂಟಿವ್ ಬರುತ್ತಿದೆ. ಕೆಲವರಿಗೆ ಟೀಮ್ ಬೇಸ್ಡ್ ಇನ್ಸೆಂಟಿವ್ ಎಂದು 1 ಸಾವಿರ ರೂ. ಬರುತ್ತಿದೆ. ಆದರೆ, ಕಾರ್ಯಕರ್ತೆಯರ ಕೈಗೆ ಮಾಸಿಕ ಕನಿಷ್ಠ 10 ಸಾವಿರ ರೂ. ಬರುವಂತೆ ಮಾಡಿ ಎಂಬುದು ನಮ್ಮ ಬೇಡಿಕೆಯಾಗಿದೆ. ಏಪ್ರಿಲ್ ನಲ್ಲಿ ಪ್ರತಿಭಟನೆ ನಡೆಸಿದಾಗ ಕನಿಷ್ಠ 10 ಸಾವಿರ ರೂ. ನಿಶ್ಚಿತ ಆದಾಯ ನೀಡುವ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಜಾರಿ ಮಾಡಿಲ್ಲ. ಸರ್ಕಾರ ಕಳೆದ ಬಜೆಟ್ ನಲ್ಲಿ ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತೆಯರಿಗೆ ತಲಾ 1 ಸಾವಿರ ರೂ. ಗೌರವಧನ ಹೆಚ್ಚಿಸುವುದಾಗಿ ಘೋಷಿಸಲಾಗಿತ್ತು. ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಿಸಲಾಗಿದೆ. ಆದರೆ, ಆಶಾ ಕಾರ್ಯಕರ್ತೆಯರಿಗೆ ಈ ಸೌಲಭ್ಯ ಸಿಕ್ಕಿಲ್ಲ. ಬದಲಾಗಿ ಅಪ್ರೈಸಲ್ ತುಂಬಿ ಕೊಡುವಂತೆ ಹೇಳಿ ಅವರ ಕೆಲಸದಲ್ಲಿ ಆತಂಕ ಹುಟ್ಟಿಸಿದ್ದಾರೆ. ಶೈಕ್ಷಣಿಕ ಮಿತಿಯನ್ನು ಎಸ್ಎಸ್ಎಲ್ಸಿ ಎಂದು ನಿಗದಿ ಮಾಡಲಾಗಿದೆ. ಈ ಹಿಂದೆ ಆಶಾಗಳಿಗೆ ಶೈಕ್ಷಣಿಕ ಮಿತಿ ಇರಲಿಲ್ಲ. ಕನಿಷ್ಠ 1 ಸಾವಿರ ಜನಸಂಖ್ಯೆಗೆ ಒಬ್ಬ ಆಶಾ ಇರಬೇಕು ಎಂಬ ಮಿತಿ ಹೇರಲಾಗಿದೆ ಈ ಎಲ್ಲ ಕ್ರಮವನ್ನು ಕೈಬಿಡಬೇಕು. ನಿವೃತ್ತರಾದವರಿಗೆ ಪಶ್ಚಿಮ ಬಂಗಾಳ ಮಾದರಿಯಲ್ಲಿ ಕನಿಷ್ಠ 3 ಲಕ್ಷ ರೂ. ಇಡಿಗಂಟು ನೀಡಬೆಕು. ಕೆಲಸದಿಂದ ತೆಗೆದ ಆಶಾ ಸುಗಮಗಾರರನ್ನು ಸೂಕ್ತ ವೇತನದೊಂದಿಗೆ ಮರು ನೇಮಕ ಮಾಡಬೇಕು. ಅವೈಜ್ಞಾನಿಕವಾದ ಆಶಾ ಸಾಫ್ಟ್ ವೇರ್ ಬಳಕೆಯನ್ನು ರದ್ದು ಮಾಡಬೇಕು ಎಂಬುದು ನಮ್ಮ ಒತ್ತಾಯವಾಗಿದೆ ಎಂದರು. ಸಂಘಟನೆಯ ಜಿಲ್ಲಾ ಅಧ್ಯಕ್ಷೆ ಪದ್ಮಾ ಚಲವಾದಿ, ಜಿಲ್ಲಾ ಸಂಘದ ಪದಾಧಿಕಾರಿಗಳಾದ ಶ್ವೇತಾ ಕಾಪಡಸ್ಕರ್, ನಿವೇದಿತಾ ಕೊಳಂಬಕರ್, ಮಹಾಲಕ್ಷ್ಮೀ ಆರ್.ನಾಯ್ಕ, ಪ್ರಭಾಮಣಿ ವಿ.ಶೆಟ್ಟಿ, ಭಾರತಿ ಭಟ್, ರೇಣುಕಾ ಎಸ್.ಭಂಡಾರಿ, ಶಾರದಾ ಗೌಡ, ವೈಶಾಲಿ ಶೇಜವಾಡಕರ್ ಸುದ್ದಿಗೋಷ್ಠಿಯಲ್ಲಿದ್ದರು.