ಮೈಸೂರಿನಲ್ಲಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ

ASHA workers protest in Mysore
Published on

ಮೈಸೂರು: ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ಸೇರಿಸಿ ಕನಿಷ್ಠ 10 ಸಾವಿರ ರೂ. ನೀಡಬೇಕು ಎಂದು ಆಗ್ರಹಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತಯರ ಸಂಘದ ಪದಾಧಿಕಾರಿಗಳು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಜನವರಿಯಲ್ಲಿ ನಾಲ್ಕು ದಿನ ಆಶಾ ಕಾರ್ಯಕರ್ತೆಯರಿಂದ ಹೋರಾಟ ನಡೆದಿದೆ. ಆಗ ಮುಖ್ಯಮಂತ್ರಿ ಹೋರಾಟ ನಿರತ ಆಶಾ ಸಂಘದ ಪದಾಧಿಕಾರಿಗಳನ್ನು ಕರೆದು ಬೇಡಿಕೆಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಿದ್ದಾರೆ. ಸಚಿವರು ಮತ್ತು ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಚರ್ಚಿಸಿ ನಿರ್ಣಯ ಕೈಗೊಂಡಿದ್ದಾರೆ. ಇಲಾಖೆ ಆಯುಕ್ತರು ಪ್ರತಿಭಟನಾ ಸ್ಥಳಕ್ಕೆ ಬಂದು ಸುಮಾರು 2 ಸಾವಿರ ಆಶಾ ಕಾರ್ಯಕರ್ತೆಯರಿಗೆ ಗೌರವ ಧನ ಹೆಚ್ಚಿಸುವುದಾಗಿ ಹೇಳಿದ್ದಾರೆ. ಆದರೆ ಇದುವರೆಗೂ ಭರವಸೆ ಈಡೇರಿಸಿಲ್ಲ ಎಂದು ಆಶಾ ಕಾರ್ಯಕರ್ತೆಯರು ಕಿಡಿ ಕಾರಿದರು.

ಪ್ರತಿ ತಿಂಗಳು ಎಲ್ಲ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ಸೇರಿಸಿ ಕನಿಷ್ಠ 10 ಸಾವಿರ ರೂ. ಗೌರವಧನ ನೀಡಲಾಗುವುದು ಎಂದು ಘೋಷಿಸಿದ್ದರು. ಆದರೆ, ಎರಡು ತಿಂಗಳಾದರೂ ಆದೇಶವಾಗಿಲ್ಲ. ಸಿಎಂ ಭರವಸೆ ನೀಡಿದಂತೆ ಆಯವ್ಯಯ ಪೂರ್ವಭಾವಿ ಸಭೆಯನ್ನು ಸಂಘದೊಂದಿಗೆ ನಡೆಸಿಲ್ಲ. ಸಂಘದಿಂದ ಸಾಕಷ್ಟು ಪ್ರಯತ್ನಿಸಿದರೂ ಈ ಸಭೆ ನಡೆದಿಲ್ಲ. ಸಂಘದಿಂದ ಸಾಕಷ್ಟು ಪ್ರಯತ್ನ ನಡೆಸಿದರೂ ಈ ಸಭೆ ನಡೆಸಿಲ್ಲ ಎಂದು ಆರೋಪಿಸಿದರು.

ಕೂಡಲೇ ಸರ್ಕಾರ ಪೂರಕ ಬಜೆಟ್‌ನಲ್ಲಿ ರಾಜ್ಯದ ಸುಮಾರು 2.50 ಲಕ್ಷ ಅಂಗನವಾಡಿ- ಬಿಸಿಯೂಟ ಕಾರ್ಯಕರ್ತೆಯರಿಗೆ 1 ಸಾವಿರ ರೂ. ಹೆಚ್ಚಿಸಿದಂತೆ 42,000 ಆಶಾ ಕಾರ್ಯಕರ್ತೆಯರಿಗೂ 1000 ರೂ. ಹೆಚ್ಚಿಸಿ, ಪೂರಕ ಬಜೆಟ್‌ನಲ್ಲಿ ಸೇರಿಸಿ, ಆದೇಶಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಎಐಯುಟಿಯುಸಿ ಜಿಲ್ಲಾ ಅಧ್ಯಕ್ಷೆ ಯಶೋಧರಾ, ಕಾರ್ಯದರ್ಶಿ ಚಂದ್ರಶೇಖರ ಮೇಟಿ, ಜಿಲ್ಲಾ ಗೌರವಾಧ್ಯಕ್ಷೆ ಸಂಧ್ಯಾ, ಅಧ್ಯಕ್ಷೆ ಭಾಗ್ಯಮ್ಮ, ಜಂಟಿ ಕಾರ್ಯದರ್ಶಿ ಮಣಿಲಾ, ಉಪಾಧ್ಯಕ್ಷರಾದ ಕೋಮಲಾ, ಸುಧಾ, ಲೀಲಾವತಿ, ಪವಿತ್ರಾ, ಸುನೀತಾ ಹಾಗೂ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net