ಮಳೆಯಲ್ಲೂ ಆಶಾ ಕಾರ್ಯಕರ್ತೆಯರ ಧರಣಿ

Sudhee_13_Asha_Workers_Protest_@_Freedom_Park (1)
Published on

ಬೆಂಗಳೂರು: ಗೌರವಧನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಅಹೋರಾತ್ರಿ ಧರಣಿ ಬುಧವಾರವೂ ನಡೆಯಿತು. ಮಳೆಯನ್ನೂ ಲೆಕ್ಕಿಸದೆ ಸ್ವಾತಂತ್ರ್ಯ ಉದ್ಯಾನದಲ್ಲಿ ಹೋರಾಟ ನಡೆಯುತ್ತಿದ್ದು, ಗುರುವಾರವೂ ಮುಂದುವರಿಯಲಿದೆ.

ರಾಜ್ಯಾದ್ಯಂತ ಧರಣಿ ನಡೆಸುತ್ತಿದ್ದು, ಕೆಲವೆಡೆ ಮಳೆಯಲ್ಲೇ ನಿಂತು ಸರ್ಕಾರದ ವಿರುದ್ಧ ೋಷಣೆ ಕೂಗಿದರು. ಈಗಾಗಲೇ ಭರವಸೆ ನೀಡಿರುವಂತೆ ಮಾಸಿಕ 10 ಸಾವಿರ ಗೌರವಧನ ನೀಡುವಂತೆ ಆಗ್ರಹಿಸಿದರು.

ಈ ವೇಳೆ ಸರ್ಕಾರಕ್ಕೆ ಹೆಣ್ಣು ಮಕ್ಕಳ ನೋವು ಅರ್ಥ ಆಗುವುದಿಲ್ಲವೇ? ಈವರೆಗೆ ಸರ್ಕಾರ ಸ್ಪಂದಿಸದಿರುವುದು ಬೇಸರದ ಸಂಗತಿ. ನಾವು ಧರಣಿ ಮುಂದುವರಿಸುತ್ತೇವೆ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಉಪಾಧ್ಯಕ್ಷೆ ಟಿ.ಸಿ.ರಮ್ಯಾ ಎಚ್ಚರಿಸಿದರು.

ಜನವರಿಯಲ್ಲಿ ನಡೆದ ಪ್ರತಿಭಟನೆ ವೇಳೆ ಸಿಎಂ ಸಿದ್ದರಾಮಯ್ಯ 10 ಸಾವಿರ ರೂ.ಗೌರವಧನ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಈವರೆಗೆ ಬಂದಿಲ್ಲ. ಬಜೆಟ್‌ನಲ್ಲಿ ಬಿಸಿಯೂಟ ಕಾರ್ಯಕರ್ತೆಯರಿಗೆ ಹೆಚ್ಚಿಸಿದಂತೆ ಆಶಾ ಕಾರ್ಯಕರ್ತೆಯರಿಗೂ ಸಾವಿರ ರೂ.ಹೆಚ್ಚಳ ಮಾಡುವುದಾಗಿ ಘೋಷಿಸಿದ್ದರು. ಈಗಾಗಲೇ 27 ಸಾವಿರ ಮಂದಿಗೆ ಗೌರವಧನ ಹೆಚ್ಚಳವಾಗಿದೆ. ಬಾಕಿ 15 ಸಾವಿರ ಮಂದಿಗೆ ಈ ಸೌಲಭ್ಯ ಸಿಗುತ್ತಿಲ್ಲ. ಕೂಡಲೇ ಎಲ್ಲರಿಗೂ ಹೆಚ್ಚಳ ಮಾಡಿದ ಮೊತ್ತ ಬಿಡುಗಡೆ ಮಾಡಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು.

ನಗರದ ಆಶಾ ಕಾರ್ಯಕರ್ತೆಯರಿಗೆ ಹೆಚ್ಚುವರಿ ಕೆಲಸ ಮತ್ತು ನಗರ ಜೀವನದ ದುಬಾರಿ ಖರ್ಚು ವೆಚ್ಚಗಳಿಗೆ ಅನುಗುಣವಾಗಿ ಕನಿಷ್ಠ ಎರಡು ಸಾವಿರ ರೂ.ಗೌರವಧನ ಹೆಚ್ಚಳ ಮಾಡಬೇಕು. ಸೇವಾ ನಿವೃತ್ತಿ ಪಡೆಯುವ ಆಶಾ ಕಾರ್ಯಕರ್ತೆಯರಿಗೆ ಪಶ್ಚಿಮ ಬಂಗಾಳ ಮಾದರಿಯಲ್ಲಿ 5 ಲಕ್ಷ ರೂ. ನೀಡಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net