

ಕಾರವಾರ: ಆಶಾ ಕಾರ್ಯಕರ್ತೆಯರ ಮೇಲ್ವಿಚಾರಣೆ ನೋಡಿಕೊಳ್ಳುತ್ತಿರುವ ಜಿಲ್ಲೆಯ ಸುಮಾರು 75 ಸುಗಮಗಾರರ ಸೇವೆಯನ್ನು ಫೆ.28 ರಿಂದ ಸ್ಥಗಿತಗೊಳಿಸಲಾಗಿದೆ. ಇದರಿಂದ ಆತಂಕಕ್ಕೊಳಗಾಗಿರುವ ಆಶಾ ಸುಗಮಗಾರರು ನಿರ್ದೇಶಕರು ಹೊರಡಿಸಿದ ಆದೇಶ ಹಿಂಪಡೆಯುವಂತೆ ಡಿಎಚ್‌ಒ ಡಾ.ನೀರಜ್ ಬಿ.ವಿ.ಅವರಿಗೆ ಅವರಿಗೆ ಬುಧವಾರ ಮನವಿ ಮಾಡಿದರು. ಪ್ರತಿ 20 ರಿಂದ 40 ಕಾರ್ಯಕರ್ತೆಯರಿಗೆ ಒಬ್ಬರಂತೆ ಸುಗಮಗಾರರನ್ನು 12 ವರ್ಷಗಳ ಹಿಂದೆ ನೇಮಿಸಲಾಗಿತ್ತು. ಅವರು 2, 3 ಹಳ್ಳಿಗಳ ಆಶಾ ಕಾರ್ಯಕರ್ತೆಯರ ಕಾರ್ಯದ ಮೇಲ್ವಿಚಾರಣೆ ಮಾಡುತ್ತಿದ್ದರು. ಅವರಿಗೆ ಮಾಸಿಕ 6 ಸಾವಿರ ಗೌರವಧನ ನೀಡಲಾಗುತ್ತಿತ್ತು. ಆದರೆ, ಆಶಾ ಕಾರ್ಯಕರ್ತೆಯರೇ ಈ ಸುಗಮಗಾರರ ಜವಾಬ್ದಾರಿಯನ್ನೂ ನಿರ್ವಹಿಸುತ್ತಿದ್ದು, ಅವರು ತಮ್ಮ ಕಾರ್ಯದ ಜತೆ ತಿಂಗಳಲ್ಲಿ 20 ದಿನ ಇತರ ಆಶಾಗಳ ಕಾರ್ಯದ ಮೇಲ್ವಿಚಾರಣೆ ಮಾಡುವುದರಿಂದ ಅವರಿಗೆ ಕೆಲಸದ ಒತ್ತಡ ಉಂಟಾಗುತ್ತಿದೆ. ಹಾಗಾಗಿ ಅವರನ್ನು ಕೆಸದಿಂದ ಬಿಡುಗಡೆ ಮಾಡಿ ಎಂದು ರಾಷ್ಟ್ರೀಯ ಆರೋಗ್ಯ ಅಭಿಯಾನದ ರಾಜ್ಯ ನಿರ್ದೇಶಕರು ಫೆ.25 ರಂದು ಆದೇಶ ಹೊರಡಿಸಿದ್ದರು. ಅದರಂತೆ ಡಿಎಚ್‌ಒ ಕ್ರಮ ವಹಿಸಿದ್ದಾರೆ. ಇದರಿಂದ ಜಿಲ್ಲೆಯ 75 ಕ್ಕೂ ಹೆಚ್ಚು ಆಶಾ ಸುಗಮಗಾರರು ಹೆಚ್ಚುವರಿ ಕಾರ್ಯದಿಂದ ಬಿಡುಗಡೆಗೊಂಡಿದ್ದು, 6 ಸಾವಿರ ಗೌರವಧನದಿಂದ ವಂಚಿತರಾಗಲಿದ್ದಾರೆ. ಆಶಾಗಳ ಸಮರ್ಪಕ ಕಾರ್ಯಕ್ಕೆ ಸುಗಮಗಾರರ ಅವಶ್ಯಕತೆ ಇದೆ ಅವರನ್ನು ಮುಂದುವರಿಸಬೇಕು ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಒತ್ತಾಯಿಸಿದೆ.