ತಾಯಿ ಬೇರುಗಳಂತೆ ಆಶಾ ಕಾರ್ಯಕರ್ತೆಯರ ಸೇವೆ

oppo_2
ಹನೂರಿನಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಅಶಾ ಕಾರ್ಯಕರ್ತೆಯರ ಸಭೆಯನ್ನು ರಾಜ್ಯ ಸಮಿತಿ ಸದಸ್ಯೆ ಉಮಾದೇವಿ ಉದ್ಘಾಟಿಸಿದರು. ಕವಿತಾ, ಸುಲೋಚನಾ, ಸುಜಾತಾ, ಚೆನ್ನಾಜಮ್ಮ ಇತರರು ಇದ್ದರು.
Published on

ಹನೂರು: ಆಶಾ ಕಾರ್ಯಕರ್ತೆಯರು ಉತ್ತಮ ಆರೋಗ್ಯ ಸೇವೆ ಸಲ್ಲಿಸುತ್ತಿದ್ದರೂ ಸರ್ಕಾರದಿಂದ ಸವಲತ್ತುಗಳು ಸಿಗುತ್ತಿಲ್ಲ. ಆದ್ದರಿಂದ ಶಾಸನ ಬದ್ಧ ಸೌಕರ್ಯ ಪಡೆಯಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದು ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಸದಸ್ಯೆ ಉಮಾದೇವಿ ತಿಳಿಸಿದರು.

ರಾಜ್ಯ ಮಟ್ಟದ ಸಮ್ಮೇಳನದ ಅಂಗವಾಗಿ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ತಾಲೂಕು ಮಟ್ಟದ ಆಶಾ ಕಾರ್ಯಕರ್ತೆಯರ ಸಭೆ ಉದ್ಘಾಟಿಸಿ ಮಾತನಾಡಿದರು.

ಆಶಾ ಕಾರ್ಯಕರ್ತೆಯರು ಆರೋಗ್ಯ ಕ್ಷೇತ್ರದಲ್ಲಿ ಕೆಳ ಹಂತದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಾಮಾಜಿಕ ಸ್ವಾಸ್ಥ್ಯಕ್ಕೆ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. 2009ರಲ್ಲಿ ಸೇವೆಗೆ ನಿಯೋಜನೆಗೊಂಡ ಮಹಿಳೆಯರು ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರಿಂದ ಇತ್ತೀಚಿನ ವರ್ಷಗಳಲ್ಲಿ ಶಿಶು ಹಾಗೂ ತಾಯಿ ಮರಣ ಪ್ರಮಾಣ ಕಡಿಮೆಯಾಗಿ ಸಾಂಸ್ಥಿಕ ಹೆರಿಗೆ ಅಭಿವೃದ್ಧಿ ಹೊಂದಿದೆ. ಆದ್ದರಿಂದ ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆಯಲ್ಲಿ ತಾಯಿ ಬೇರುಗಳಂತೆ ಸೇವೆ ಸಲ್ಲಿಸುತ್ತಿದ್ದಾರೆ. ಜತೆಗೆ ಮೊಬೈಲ್ ಆಧಾರಿತ ಸೇವೆ ನೀಡುತ್ತಿದ್ದಾರೆ ಎಂದರು.

ಸರ್ಕಾರಿ ಹಾಗೂ ಖಾಸಗಿ ಕಾರ್ಯಕ್ರಮಗಳಿಗೆ ಜನರನ್ನು ಕರೆತರುವ ಜವಾಬ್ದಾರಿ ಹೊತ್ತಿದ್ದಾರೆ. ಕೋವಿಡ್ ಸಂಕಷ್ಟದ ಕಾಲದಲ್ಲಿ ಅನುಪಮ ಸೇವೆ ಗುರ್ತಿಸಿ ಸರ್ಕಾರ ಕರೊನಾ ವಾರಿಯರ್ಸ್‌ ಎಂದು ಶ್ಲಾಘಿಸಿದೆ. ಆದರೆ ಇವರ ಬದುಕು ಉತ್ತಮ ಸ್ಥಿತಿಯಲ್ಲಿಲ್ಲ. ಹಾಗಾಗಿ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು. ಶಾಸನಬದ್ಧ ಸೌಕರ್ಯ ಒದಗಿಸುವುದರ ಮೂಲಕ ಸಾಮಾಜಿಕ ಭದ್ರತೆ ಕಲ್ಪಿಸಬೇಕು ಎಂಬುದು ಸೇರಿದಂತೆ ಅನೇಕ ಬೇಡಿಕೆಗಳನ್ನು ಸರ್ಕಾರಕ್ಕೆ ಒತ್ತಾಯಿಸುವ ಸಲುವಾಗಿ ಸೆ.14 ಮತ್ತು 15 ರಂದು ಕಲಬುರಗಿಯಲ್ಲಿ ರಾಜ್ಯ ಮಟ್ಟದ ಸಮ್ಮೇಳನ ಆಯೋಜಿಸಲಾಗಿದೆ. ಹೀಗಾಗಿ ತಾಲೂಕು ಮಟ್ಟದಲ್ಲಿ ಸಭೆ ನಡೆಸಲಾಗುತ್ತಿದೆ. ಆದ್ದರಿಂದ ಈ ಸಮ್ಮೇಳನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರ ಮೂಲಕ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

ಸಭೆಯಲ್ಲಿ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷೆ ಕವಿತಾ, ತಾಲೂಕು ಅಧ್ಯಕ್ಷರಾದ ಕೊಳ್ಳೇಗಾಲದ ಚೆನ್ನಾಜಮ್ಮ, ಚಾ.ನಗರದ ರಾಣಿ, ಹನೂರಿನ ಸುಲೋಚನಾ, ಕಾರ್ಯದರ್ಶಿ ಸುಜಾತಾ, ಕಾರ್ಯಾಧ್ಯಕ್ಷೆ ಶಶಿ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net