ಕುಂದುಕೊರತೆಗಳ ಸಭೆಯಲ್ಲಿ ಸಮಸ್ಯೆ ಪರಿಹಾರ

problem
ತಾಲೂಕು ಮಟ್ಟದ ಆಶಾ ಕಾರ್ಯಯಕರ್ತೆಯರ ಸಮ್ಮೇಳನದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರೇಮಾನಂದ್ ಕೆ. ಮಾತನಾಡಿದರು
Published on

ಕುಂದಾಪುರ: ಇತರ ಜಿಲ್ಲೆಗಳಿಗೆ ಹೋಲಿಸಿದರೆ ಉಡುಪಿ ಜಿಲ್ಲೆಯಲ್ಲಿ ಆಶಾ ಕಾರ್ಯಕರ್ತೆಯರು ಚೆನ್ನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಕಾಲದಲ್ಲಿ ಗೌರವಧನ ಪಡೆಯುತ್ತಿದ್ದು ಪರಿಶೀಲನಾ ತಂಡದವರು ಇದನ್ನು ದೃಢೀಕರಿಸಿದ್ದಾರೆ. ಕುಂದುಕೊರತೆಗಳ ಸಭೆಯಲ್ಲಿ ಸಮಸ್ಯೆ ಹೇಳಿಕೊಂಡರೆ ಪರಿಹಾರ ಸಾಧ್ಯ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರೇಮಾನಂದ್ ಕೆ. ಹೇಳಿದರು.

ಕುಂದಾಪುರದಲ್ಲಿ ರಾಜ್ಯ ಸಂಯುಕ್ತ ಆಶಾ ಕಾರ್ಯಯಕರ್ತೆಯರ ಸಂಘ ಕುಂದಾಪುರ ತಾಲೂಕು ಸಮಿತಿ ವತಿಯಿಂದ ಕುಂದಾಪುರ ತಾಲೂಕು ಮಟ್ಟದ ಆಶಾ ಕಾರ್ಯಕರ್ತೆಯರ ಸಮ್ಮೇಳನದಲ್ಲಿ ಭಾನುವಾರ ಮಾತನಾಡಿದರು.

ಎಐಯುಟಿಯುಸಿ ರಾಜ್ಯ ಉಪಾಧ್ಯಕ್ಷ ಕೆ.ವಿ.ಭಟ್ ಮಾತನಾಡಿ, ಆಶಾ ಕಾರ್ಯಕರ್ತೆಯರನ್ನು ದಿನಕ್ಕೆ 3 ಗಂಟೆ ಎಂದು ಹೇಳಿ ವಾರದ ಅಷ್ಟೂ ದಿನ ದುಡಿಸುತ್ತಿದ್ದಾರೆ. ನಗರ ಹಾಗೂ ಹಳ್ಳಿಗಳಲ್ಲಿ ತಳಮಟ್ಟದ ಆರೋಗ್ಯ ಕಾರ್ಯಯಕರ್ತೆಯರಾಗಿ, ಗ್ರಾಮ ನೈರ್ಮಲ್ಯ, ಸ್ವಚ್ಛತೆ, ಗರ್ಭಿಣಿಯರ ಆರೋಗ್ಯ, ಬಾಣಂತಿ, ಮಗುವಿನ ಆರೋಗ್ಯ ಹೀಗೆ ಹಲವಾರು ರೀತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಯಕರ್ತೆಯರ ಜೀವನ ಭದ್ರತೆ ಹಾಗೂ ಸರ್ಕಾರ ತಮ್ಮ ಪರವಾದ ನೀತಿ ಜಾರಿಗೊಳಿಸುವಂತೆ ಒತ್ತಾಯಿಸುವ ನಿಟ್ಟಿನಲ್ಲಿ ಸಮ್ಮೇಳನ ನಡೆಯುತ್ತಿದೆ ಎಂದರು.

ಸಂಘದ ಗೌರವ ಅಧ್ಯಕ್ಷೆ ಮಂಜಮ್ಮ ಶೆಡ್ತಿ, ಆಶಾ ಯೂನಿಯನ್ ಉಡುಪಿ ಜಿಲ್ಲಾ ಮೇಲ್ವಿಚಾರಕಿ ಹರಿಣಿ ಆಚಾರ್ಯ, ಜಿಲ್ಲಾ ಅಧ್ಯಕ್ಷೆ ಸುಹಾಸಿನಿ ಶೆಟ್ಟಿ, ತಾಲೂಕು ಅಧ್ಯಕ್ಷೆ ಸಾಧು ಕೋಡಿ ಉಪಸ್ಥಿತರಿದ್ದರು. ಚಂದ್ರಕಲಾ ಕುಂಭಾಶಿ ವರದಿ ವಾಚಿಸಿದರು.

ಸೆ.1ರಂದು ಕಡಿಯಾಳಿಯಲ್ಲಿ ಸಮ್ಮೇಳನ

ಪ್ರಥಮ ರಾಜ್ಯ ಸಮ್ಮೇಳನ ಸೆ.14 ಹಾಗೂ 15ರಂದು ಕಲಬುರಗಿಯಲ್ಲಿ ನಡೆಯಲಿದ್ದು, ಅದಕ್ಕೆ ಪೂರ್ವಭಾವಿಯಾಗಿ ಈ ತಾಲೂಕು ಸಮ್ಮೇಳನ ನಡೆಯುತ್ತಿದೆ. ರಾಜ್ಯದಲ್ಲಿ 42 ಸಾವಿರ ಕಾರ್ಯಕರ್ತೆಯರಿದ್ದು, 160 ತಾಲೂಕು ಸಮ್ಮೇಳನ 12 ಜಿಲ್ಲಾ ಸಮ್ಮೇಳನಗಳಾಗಿದ್ದು ಸೆ.1ರಂದು ಉಡುಪಿಯ ಕಡಿಯಾಳಿಯಲ್ಲಿ ಜಿಲ್ಲಾ ಸಮ್ಮೇಳನ ನಡೆಯಲಿದೆ ಎಂದು ಕೆ.ವಿ.ಭಟ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net