ಕರೊನಾ ನಿಯಂತ್ರಣಕ್ಕೆ ಸಾಥ್, ಆಶಾ ಕಾರ್ಯಕರ್ತೆಯರಿಂದ ಸಮನ್ವಯ ಸೇವೆ

asha
Published on

ಕೋಟ: ಕರೊನಾ ವಿಪತ್ತಿನ ನಿಯಂತ್ರಣಕ್ಕೆ ಜಿಲ್ಲಾಡಳಿತ ವ್ಯವಸ್ಥಿತ ಕ್ರಮಗಳ ಮೂಲಕ ಪ್ರಯತ್ನಿಸಿದೆ. ಪ್ರತಿ ಗ್ರಾಮಗಳಲ್ಲಿ ಆಶಾ ಕಾರ್ಯಕರ್ತೆಯರು ಪ್ರತಿಯೊಂದು ಮನೆಗೆ ತೆರಳಿ ಪ್ರತಿಯೊಬ್ಬರಿಗೂ ವೈಯಕ್ತಿಕ ಆದ್ಯತೆ ನೀಡಿ ಆರೋಗ್ಯ, ಸ್ವಚ್ಛತೆ, ಸಾಮಾಜಿಕ ಅಂತರ ಕಾಪಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ಅಗತ್ಯ ಸೇವೆ ಒದಗಿಸುವ ಎಲ್ಲ ಇಲಾಖೆಗಳಿಗೆ ಸಮನ್ವಯ ಸೇವೆ ನೀಡುತ್ತಿರುವುದರ ಹಿಂದೆ ಗ್ರಾಮಗಳ ಪ್ರತಿ ಮನೆಗೂ ಭೇಟಿ ಮಾಡುತ್ತಿರುವ ಆಶಾ ಕಾರ್ಯಕರ್ತೆಯರ ಪಾತ್ರ ಮಹತ್ತರವಾಗಿದೆ. ಕ್ವಾರಂಟೈನ್ ಅವಧಿ ಮುಕ್ತಾಯದ ಹಂತದವರೆಗಿನ ಹಲವು ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿರುವುದಲ್ಲದೇ ಪ್ರಸ್ತುತ ಅಂತರ್ ಜಿಲ್ಲೆ, ರಾಜ್ಯದಿಂದ ಜಿಲ್ಲೆಗೆ ಬಂದವರ ಮಾಹಿತಿ ಸಂಗ್ರಹಿಸಿ ಪಂಚಾಯಿತಿಯ ಟಾಸ್ಕ್‌ಫೋರ್ಸ್ ಮತ್ತು ಇಲಾಖೆಗಳಿಗೆ ವರದಿ ನೀಡುವ ಜವಾಬ್ದಾರಿಯೂ ಆಶಾ ಕಾರ್ಯಕರ್ತೆಯರ ಮೇಲಿದೆ. ಇತರ ಕಾಯಿಲೆಯ ಮಾಹಿತಿ ನೀಡುವ ಜವಾಬ್ದಾರಿಯೂ ನೀಡಲಾಗಿದೆ.

ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಸಂಖ್ಯೆಯಲ್ಲಿ ಅತಿ ಹೆಚ್ಚು ಜನ ಸಂಖ್ಯೆ ಕೇಂದ್ರವಾಗಿದ್ದು, ಆಶಾ ಕಾರ್ಯಕರ್ತೆಯರ ಮೇಲ್ವಿಚಾರಕಿ ಭವಾನಿ ಪ್ರಕಾರ ಕೋಟ ಮತ್ತು ಸಾಲಿಗ್ರಾಮ ಪ್ರದೇಶದಲ್ಲಿ ಹೆಚ್ಚಿನ ಗ್ರಾಮಗಳು ಬಯಲು ಪ್ರದೇಶ ಹೊಂದಿದ್ದು, ಮನೆಗಳ ಅಂತರ ಕೆಲವೊಂದು ಭಾಗಗಳಲ್ಲಿ ದೂರ ದೂರವಿದ್ದು, ಪ್ರತಿ ಮನೆಗೂ ಹೋಗಲು ಮತ್ತು ಜನರನ್ನು ಸಂದರ್ಶಿಸಲು ಹೆಚ್ಚಿನ ಸಮಯ ಅಗತ್ಯವಿರುತ್ತದೆ. ಆದರೆ ನಾಗರಿಕರ ಸಹಕಾರ ಉತ್ತಮವಾಗಿರುವುದರಿಂದ ಕಾರ್ಯ ಸುಗಮವಾಗಿದೆ ಎನ್ನುತ್ತಾರೆ.

ಕೋಟ, ಕೋಟತ್ತಟ್ಟು, ಐರೋಡಿ, ಪಾಂಡೇಶ್ವರ, ವಡ್ಡರ್ಸೆ, ಸಾಲಿಗ್ರಾಮ ಪಟ್ಟಣಪಂಚಾಯಿತಿ ವ್ಯಾಪ್ತಿಯ ಪಂಚಾಯಿತಿ ಅಧಿಕಾರಿಗಳು ವಿವರಿಸುವಂತೆ ಹಾಗೂ ಸ್ಥಳೀಯ ಆಡಳಿತಗಳು ಪರಿಣಾಮಕಾರಿಯಾಗಿ ನಿಯಮ ಪಾಲನೆ ಮಾಡಿರುವುದು ನಿಯಂತ್ರಣದ ನಿಟ್ಟಿನಲ್ಲಿ ಅತೀ ಮುಖ್ಯವಾಗಿದೆ ಎನ್ನುತ್ತಾರೆ. ಸುಡುಬಿಸಿಲಿನಲ್ಲಿ ಗ್ರಾಮಾಂತರ ಭಾಗದಲ್ಲಿ ದೂರದೂರವಿರುವ ಮನೆಗೆ ಸಾಗಿ ಕರೊನಾದಂತಹ ರೋಗಗಳ ಬಗ್ಗೆ ಮಾಹಿತಿ ನೀಡುತ್ತಿರುವ ಆಶಾ ಕಾರ್ಯಕರ್ತೆಯರ ಕಾರ್ಯ ನಿಜಕ್ಕೂ ಶ್ಲಾಘನೀಯ.

ಗ್ರಾಮಾಂತರ ಭಾಗದಲ್ಲಿ ಕಿಲೋಮೀಟರ್‌ಗಟ್ಟಲೆ ನಡೆದುಕೊಂಡೇ ಸಾಗಿ ಕರೊನಾ ಜಾಗೃತಿ ಮೂಡಿಸುವ ಆಶಾ ಕಾರ್ಯಕರ್ತೆಯರಿಗೆ ಸರ್ಕಾರ ಮಾತ್ರ ಅತೀ ಕಡಿಮೆ ಭತ್ಯೆ ನೀಡುತ್ತಿರುವು ಮಾತ್ರ ಬೇಸರದ ಸಂಗತಿ.

ಸ್ಥಳೀಯ ಗ್ರಾಮಪಂಚಾಯಿತಿ ಮತ್ತು ಆರೋಗ್ಯ ಇಲಾಖೆಯ ನಿಕಟ ಸಂಪರ್ಕ ಹೊಂದಿರುವ ಕಾರ್ಯಕರ್ತೆಯರು ಪ್ರತಿ ಮನೆಗೂ ಭೇಟಿ ನೀಡಿ ಜಾಗೃತಿ ಮೂಡಿಸುತ್ತಿದ್ದಾರೆ. ಜತೆಗೆ ಮಾಹಿತಿ ಸಂಗ್ರಹಿಸುತ್ತಿರುವುದರಿಂದ ಪಂಚಾಯಿತಿ ಮಟ್ಟದಲ್ಲಿ ಟಾಸ್ಕ್‌ಫೋರ್ಸ್ ಸಮನ್ವಯದಿಂದ ಕರೊನಾ ನಿಯಂತ್ರಣದಲ್ಲಿ ನಿರೀಕ್ಷಿತ ಪ್ರಗತಿ ಲಭಿಸಿದೆ.

-ಸುರೇಶ್, ಅಭಿವೃದ್ಧಿ ಅಧಿಕಾರಿ ಕೋಟ ಗ್ರಾಮಪಂಚಾಯಿತಿ

ಕರೊನಾದಂತಹ ಮಹಾಮಾರಿ ಕಾಯಿಲೆ ಬರುವುದಕ್ಕಿಂತ ಮೊದಲೆ ನಮಗೆ ಹೆಚ್ಚು ಜವಾಬ್ದಾರಿಗಳಿದ್ದವು. ಆದರೆ ಈ ಕಾಯಿಲೆ ಬಂದ ನಂತರ ಒತ್ತಡ ಹೆಚ್ಚಾಗಿದೆ. ನಿರಂತರ ವೈದ್ಯಾಧಿಕಾರಿಗಳ ಸಂಪರ್ಕದಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ. ಈ ರೀತಿಯ ಕಾರ್ಯದ ನಡುವೆಯೂ ನಮಗೆ ಅತಿ ಕಡಿಮೆ ಸಂಬಳ ನೀಡುತ್ತಿದ್ದಾರೆ. ಸರ್ಕಾರ ಈ ಬಗ್ಗೆ ಗಮನ ಹರಿಸಿ ವೇತನ ಹೆಚ್ಚಿಸಬೇಕಿದೆ.

-ಹೆಸರು ಹೇಳಲಿಚ್ಛಿಸದ ಕಾರ್ಯಕರ್ತೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net